ಅಮೆರಿಕ ಜತೆ ಭಾರತ 1000 ಕೋಟಿ ಡಾಲರ್ ಮೌಲ್ಯದ ರಕ್ಷಣಾ ಒಪ್ಪಂದ

Update: 2019-06-24 03:47 GMT

ಹೊಸದಿಲ್ಲಿ: ಭಾರತ ಹಾಗೂ ಅಮೆರಿಕ ನಡುವೆ ವ್ಯಾಪಾರ ಹಾಗೂ ವಲಸಿಗರ ಸಂಬಂಧ ಸಂಘರ್ಷ ಏರ್ಪಟ್ಟಿರುವ ನಡುವೆಯೇ ಮುಂದಿನ 2-3 ವರ್ಷಗಳಲ್ಲಿ 1000 ಕೋಟಿ ಡಾಲರ್ ಮೌಲ್ಯದ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಳ್ಳಲು ಭಾರತ ಮುಂದಾಗಿದೆ.

ಏತನ್ಮಧ್ಯೆ ರಷ್ಯಾದಿಂದ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಖರೀದಿ ಮಾಡುವ ವಿರುದ್ಧ ಅಮೆರಿಕದ ದಿಗ್ಬಂಧನದಿಂದ ಪಾರಾಗಲು ಪಾವತಿ ವ್ಯವಸ್ಥೆ ಬಗ್ಗೆಯೂ ಭಾರತ ಹಾಗೂ ರಷ್ಯಾ ಕಾರ್ಯತಂತ್ರ ಸಿದ್ಧಪಡಿಸುತ್ತಿವೆ.

ಅಮೆರಿಕ ಜತೆ ಭಾರತ ಅಂತಿಮ ಪಡಿಸಿರುವ ಇತ್ತೀಚಿನ ಒಪ್ಪಂದದ ಅನ್ವಯ ಅಮೆರಿಕದ ವಿದೇಶಿ ಸೇನಾ ಮಾರಾಟ ಯೋಜನೆಯಡಿ 300 ಕೋಟಿ ಡಾಲರ್ ವೆಚ್ಚದಲ್ಲಿ 10 ಪೊಸೀಡನ್-81 ಧೀರ್ಘವ್ಯಾಪ್ತಿಯ ಸಾಗರ ಗಸ್ತು ವಿಮಾನ ಖರೀದಿಗೆ ನಿರ್ಧರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಮೂಲಗಳು ಹೇಳಿವೆ.

"ಈ ವಿಮಾನಗಳ ಖರೀದಿಗೆ ರಕ್ಷಣಾ ಸಚಿವಾಲಯ ಸಮಿತಿ ಕಳೆದ ವಾರ ಅನುಮತಿ ನೀಡಿದೆ. ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿಗೆ ಅನುಮೋದನೆಗಾಗಿ ಇದನ್ನು ಆಗಸ್ಟ್ ಒಳಗೆ ಕಳುಹಿಸಲಾಗುತ್ತದೆ. ಈಗಾಗಲೇ ಭಾರತ ಖರೀದಿಸಿರುವ ಇಂಥ 12 ವಿಮಾನಗಳಿಗಿಂತ ಹೊಸ ವಿಮಾನ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುತ್ತವೆ" ಎಂದು ಮೂಲಗಳು ತಿಳಿಸಿವೆ.

ಇದರ ಜತೆಗೆ ಬಹು ಪಾತ್ರ ನಿರ್ವಹಿಸುವ 24 ನೌಕಾ ರೊಮೆಯೊ ಹೆಲಿಕಾಪ್ಟರ್, ನ್ಯಾಷನಲ್ ಅಡ್ವಾನ್ಸ್‌ಡ್ ಸರ್ಫೇಸ್ ಟೂ ಏರ್ ಮಿಸೈಲ್ ಸಿಸ್ಟಮ್-2, 6 ಅಪಾಚೆ ದಾಳಿ ಹೆಲಿಕಾಪ್ಟರ್‌ಗಳ ಖರೀದಿ ಒಪ್ಪಂದಗಳು ಮಾತುಕತೆ ಹಂತದಲ್ಲಿವೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News