ದೇಶಾದ್ಯಂತ ಮುಂಗಾರು ಚುರುಕು

Update: 2019-06-24 03:59 GMT

ಹೊಸದಿಲ್ಲಿ: ಹನ್ನೆರಡು ವರ್ಷಗಳಲ್ಲೇ ಅತ್ಯಂತ ನಿಧಾನ ಪ್ರಗತಿಯನ್ನು ಕಂಡ ಮುಂಗಾರು ಇದೀಗ ದೇಶಾದ್ಯಂತ ಚುರುಕುಗೊಂಡಿದೆ. ಜೂನ್ 19ರ ಬಳಿಕ ಕೇವಲ ನಾಲ್ಕು ದಿನಗಳಲ್ಲಿ 10 ರಾಜ್ಯಗಳಿಗೆ ಮುಂಗಾರು ಮಾರುತ ವ್ಯಾಪಿಸಿದ್ದು, ಉತ್ತರ ಪ್ರದೇಶಕ್ಕೂ ಮುಂಗಾರು ಪ್ರವೇಶವಾಗಿದೆ.

ರವಿವಾರ ವಾರಣಾಸಿ ತಲುಪಿರುವ ಮುಂಗಾರು ಮಾರುತ ಬಂಗಾಳಕೊಲ್ಲಿಯ ಉತ್ತರದಿಂದ ಕಳೆದ ನಾಲ್ಕು ದಿನಗಳಲ್ಲಿ ಸುಮಾರು 700 ಕಿಲೋಮೀಟರ್ ದೂರ ಕ್ರಮಿಸಿದೆ ಎಂದು ಹವಾಮಾನ ಇಲಾಖೆ ಮೂಲಗಳು ಹೇಳಿವೆ.

ಆದರೆ ಸಾಮಾನ್ಯವಾಗಿ ಜೂನ್ 10ರ ವೇಳೆಗೆ ಮುಂಬೈಗೆ ಆಗಮಿಸುವ ಮುಂಗಾರು ಮಾರುತ ಇನ್ನೂ ಮಹಾರಾಷ್ಟ್ರದತ್ತ ಮುಖ ಮಾಡಿಲ್ಲ. ಒಂದೆರಡು ದಿನಗಳಲ್ಲಿ ಮಹಾರಾಷ್ಟ್ರದ ಕೆಲವೆಡೆಗಳಿಗೆ ಮುಂಗಾರು ವ್ಯಾಪಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಪ್ರಧಾನ ಮುಂಗಾರು ಮುನ್ಸೂಚಕ ಡಿ.ಶಿವಾನಂದ ಪೈ ಹೇಳಿದ್ದಾರೆ.

ಇಷ್ಟಾಗಿಯೂ ಮಳೆ ಕೊರತೆಯ ಚಿತ್ರಣ ಬದಲಾಗಿಲ್ಲ. ಜೂನ್ 1ರಿಂದ 23ರವರೆಗೆ ಮುಂಗಾರು ಮಳೆ ಪ್ರಮಾಣ ವಾಡಿಕೆಗಿಂತ ಶೇಕಡ 38ರಷ್ಟು ಕಡಿಮೆ ಇದೆ. ಜೂನ್ 19ರ ವೇಳೆಗೆ ಮಳೆ ಕೊರತೆ ಪ್ರಮಾಣ ಶೇಕಡ 44ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಆದರೆ ಮುಂಗಾರು ವಿಳಂಬ ಹಾಗೂ ಆರಂಭಿಕ ಪ್ರಗತಿ ಕುಂಠಿತವಾದ ಹಿನ್ನೆಲೆಯಲ್ಲಿ ಇನ್ನೂ ಚಿತ್ರಣ ಬದಲಾಗಿಲ್ಲ ಎಂದು ಹೇಳಲಾಗಿದೆ.

ಆದರೂ ಮುಂಗಾರು ವೇಗ ಪಡೆದಿರುವುದು ಬರಪೀಡಿತ ಕೇಂದ್ರ ಭಾರತ ಹಾಗೂ ದಕ್ಷಿಣ ಭಾರತದ ಪ್ರದೇಶಗಳಿಗೆ ವರದಾನವಾಗಿದೆ. ಬಿಹಾರದಲ್ಲೂ ಮಳೆಯಾಗುತ್ತಿದ್ದು, ಉಷ್ಣಾಂಶ ಕಡಿಮೆಯಾಗುವ ಸೂಚನೆ ಇದೆ. ಇದರಿಂದ ಮೆದುಳು ಜ್ವರ ಪ್ರಕರಣಗಳೂ ಕಡಿಮೆಯಾಗುವ ಸಾಧ್ಯತೆ ಇದೆ. ಭೀಕರ ಬರದಿಂದ ಕಂಗೆಟ್ಟಿರುವ ಮರಾಠವಾಡ ಮತ್ತು ವಿದರ್ಭ ಪ್ರದೇಶದಲ್ಲೂ ರವಿವಾರ ಉತ್ತಮ ಮಳೆಯಾಗಿದೆ.

ಮಧ್ಯಪ್ರದೇಶ, ರಾಯಲಸೀಮೆ, ಆಂಧ್ರದ ಕರಾವಳಿ, ಛತ್ತೀಸ್‌ಗಢ, ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶದಲ್ಲೂ ಮುಂಗಾರು ಚುರುಕಾಗಿದೆ. ಕರ್ನಾಟಕ, ತೆಲಂಗಾಣ, ಪಶ್ಚಿಮ ಮಧ್ಯಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲೂ ರವಿವಾರ ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News