ಚಿಕ್ಕಮಗಳೂರು: ಟ್ಯಾಂಕರ್ ಢಿಕ್ಕಿ; ಬೈಕ್ ನಲ್ಲಿದ್ದ ಅಣ್ಣ-ತಂಗಿ ಸ್ಥಳದಲ್ಲೇ ಮೃತ್ಯು

Update: 2019-06-24 14:01 GMT

ಚಿಕ್ಕಮಗಳೂರು, ಜೂ.24: ಮಹಿಳೆಯೊಬ್ಬರು ತನ್ನ ಎರಡು ವರ್ಷದ ಮಗನೊಂದಿಗೆ ಸಹೋದರನ ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಗ್ರಾಮವೊಂದಕ್ಕೆ ನೀರು ಸಾಗಿಸುತ್ತಿದ್ದ ಟ್ಯಾಂಕರ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಹಾಗೂ ಆಕೆಯ ಸಹೋದರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ತಾಲೂಕಿನ ಹಳೇ ಲಕ್ಯಾ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಲತಾ ಮಣಿ(25) ಹಾಗೂ ಆಕೆಯ ಸಹೋದರ ಮನೋಜ್(30) ಎಂದು ಗುರುತಿಸಲಾಗಿದ್ದು, ಇವರು ಮೂಲತಃ ತಾಲೂಕಿನ ಎಸ್.ಬಿದರೆ ಗ್ರಾಮದವರೆಂದು ಗುರುತಿಸಲಾಗಿದೆ. ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಮಗುವನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸೋಮವಾರ ಬೆಳಗ್ಗೆ ಎಸ್.ಬಿದರೆ ಗ್ರಾಮದ ತನ್ನ ತವರು ಮನೆಯಿಂಂದ ಸಹೋದರ ಮನೋಜ್‍ನೊಂದಿಗೆ ಬೈಕ್‍ನಲ್ಲಿ ಮಗನನ್ನು ಕರೆದುಕೊಂಡು ಚಿಕ್ಕಮಗಳೂರಿನತ್ತ ಬರುತ್ತಿದ್ದರು. ಈ ವೇಳೆ ಚಿಕ್ಕಮಗಳೂರು ಕಡೆಯಿಂದ ಬರುತ್ತಿದ್ದ ನೀರು ಪೂರೈಕೆ ವಾಹನ ಚಿಕ್ಕಮಗಳೂರು ನಗರ ಸಮೀಪದ ಹಳೇ ಲಕ್ಯಾ ಗ್ರಾಮದ ಸಮೀಪದಲ್ಲಿರುವ ತಿರುವಿನಲ್ಲಿ ಬೈಕ್‍ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದ್ದು, ಲತಾಮಣಿ ಹಾಗೂ ಆಕೆಯ ಸಹೋದರ ಮನೋಜ್ ಇಬ್ಬರ ತಲೆ ರಸ್ತೆಗೆ ಅಪ್ಪಳಿಸಿದೆ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಪರಿಣಾಮ ಅಣ್ಣ-ತಂಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇವರೊಂದಿಗೆ ಬೈಕ್‍ನಲ್ಲಿದ್ದ ಎರಡು ವರ್ಷದ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಟ್ಯಾಂಕರ್ ವಾಹನ ಪಲ್ಟಿಯಾಗಿದ್ದರೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಅಪಘಾತದಲ್ಲಿ ಬದುಕುಳಿದಿದ್ದ ಮಗುವನ್ನು ಟ್ಯಾಂಕರ್ ವಾಹನ ಚಾಲಕನೇ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದ್ದಾನೆಂದು ತಿಳಿದು ಬಂದಿದೆ. ಟ್ಯಾಂಕರ್ ಲಾರಿ ಲಕ್ಯಾ ಗ್ರಾಮದ ಪಾಂಡು ಎಂಬವರಿಗೆ ಸೇರಿದ್ದೆಂದು ತಿಳಿದು ಬಂದಿದೆ. 

ಲತಾಮಣಿ ಪತಿ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದು, ಸೋಮವಾರ ತನ್ನ ಸಹೋದರನೊಂದಿಗೆ ಲತಾಮಣಿ ತವರು ಮನೆಯಿಂದ ಪತಿಯ ಮನೆಗೆ ಹಿಂದಿರುಗುತ್ತಿದ್ದರೆಂದು ತಿಳಿದು ಬಂದಿದೆ.

ಅಪಘಾತದ ಬಳಿಕ ಮೃತರ ಶವಗಳನ್ನು ಜಿಲ್ಲಾಸ್ಪತ್ರೆಗೆ ತರಲಾಗಿದ್ದು, ಮಗುವನ್ನು ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆಗೆ ದಾಖಲಿಸಲಾಗಿದೆ. ಆಸ್ಪತ್ರೆ ಆವರಣದಲ್ಲಿ ಮನೋಜ್, ಲತಾಮಣಿ ಪೋಷಕರ ಆಕ್ರಂದನ ಕರುಳುಹಿಂಡುವಂತಿತ್ತು. ಶಾಸಕ ಸಿ.ಟಿ.ರವಿ ಸೇರಿದಂತೆ ಪ್ರಮುಖರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸಿ, ಮೃತರ ಪೋಷಕರನ್ನು ಸಂತೈಸುತ್ತಿದ್ದ ದೃಶ್ಯಗಳು ಕಂಡುಬಂದವು.

ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಟ್ಯಾಂಕರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News