ಕಾಳುಮೆಣಸು ಕಳವು ಪ್ರಕರಣ: ಮಾಲು ಸಮೇತ ಮೂವರ ಬಂಧನ

Update: 2019-06-24 12:45 GMT

ಮಡಿಕೇರಿ, ಜೂ.24 : ಕಲ್ಲೂರು ಗ್ರಾಮದಲ್ಲಿ ನಡೆದ ಕರಿಮೆಣಸು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಕೂರು ಗ್ರಾಮದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಲ್ಲೂರು ನಿವಾಸಿ ಸುನೀತ್ ಅವರ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ ರೂ.2.25 ಲಕ್ಷ ಮೌಲ್ಯದ 7 ಕ್ವಿಂಟಾಲ್ ಕರಿಮೆಣಸು ಕಳ್ಳತನ ಮಾಡಿದ ಆರೋಪದಡಿ ನಾಕೂರು ಶಿರಂಗಾಲ ಗ್ರಾಮದ ನಿವಾಸಿಗಳಾದ ಉದಯ (27), ವಿನೋದ (20) ಹಾಗೂ ಟಿ.ಎಂ.ಸುಬ್ಬುರಾಜು (ಸುಬ್ರಮಣಿ) (35) ಎಂಬವರನ್ನು ಬಂಧಿಸಿರುವ ಪೊಲೀಸರು ಸುಮಾರು 7 ಕ್ವಿಂಟಾಲ್ ಕರಿಮೆಣಸು, ಕಳ್ಳತನಕ್ಕೆ ಬಳಸಿದ ಮಾರುತಿ 800 ಕಾರು ಹಾಗೂ ಅಪ್ಪಾಚ್ಚಿ ದ್ವಿಚಕ್ರ ವಾಹನವನ್ನು ಆರೋಪಿಗಳ ಬಳಿಯಿಂದ ವಶಪಡಿಸಿಕೊಂಡಿದ್ದಾರೆ.

ಕಲ್ಲೂರು ಗ್ರಾಮದ ಕಾಫಿ ಬೆಳೆಗಾರ ಸುನೀತ್ ತಂದೆ ಕುಮಾರಪ್ಪ ಅವರ ತೋಟದಲ್ಲಿ ಬೆಳೆದ ಕರಿಮೆಣಸನ್ನು ಕಟಾವುಗೊಳಿಸಿ ತಮ್ಮ ಗೆಸ್ಟ್ ಹೌಸ್ ಕೆಳಭಾಗದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಅವರನ್ನು ನೋಡಿ ಬರಲೆಂದು ಮಂಗಳೂರಿನ ಆಸ್ಪತ್ರೆಗೆ ತೆರಳಿದ್ದ ಸುನೀತ್ ಮರಳಿ ಮನೆ ಸೇರಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ನಂತರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರ ನಿರ್ದೇಶನದಂತೆ ತನಿಖೆ ಕೈಗೊಂಡು ಮಾಲು ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮವಾರಪೇಟೆ ಉಪವಿಭಾಗದ ಉಪಅಧೀಕ್ಷಕ ಪಿ.ಕೆ.ಮುರುಳೀಧರ್ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಬಿ.ಎಸ್.ದಿನೇಶ್ ಕುಮಾರ್, ಸುಂಟಿಕೊಪ್ಪ ಠಾಣಾಧಿಕಾರಿ ಎಸ್.ಎನ್.ಜಯರಾಮ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಯು.ಎ.ಸತೀಶ್, ಬಿ.ವಿ.ಹರೀಶ್‍ಕುಮಾರ್, ಪುನೀತ್‍ಕುಮಾರ್, ಅಭಿಲಾಷ್, ವಿಜಯಕುಮಾರ್, ಖಾದರ್, ಮಂಜುನಾಥ್, ಸುದೀಶ ಕುಮಾರ್, ಎ.ಆರ್.ಗಣೇಶ್, ರವಿ, ಅಬ್ದುಲ್ ರೆಹಮಾನ್, ಸಂಪತ್‍ಕುಮಾರ್, ಪ್ರಶಾಂತ್ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News