10 ಲಕ್ಷ ಹೊಸ ರೈತರಿಗೆ ಸಾಲ ಸೌಲಭ್ಯ ಕಲ್ಪಿಸುವ ಉದ್ದೇಶ: ಸಚಿವ ಬಂಡೆಪ್ಪ ಕಾಶೆಂಪೂರ್

Update: 2019-06-24 13:01 GMT

ಬೆಂಗಳೂರು, 24: ರಾಜ್ಯದಲ್ಲಿನ 10 ಲಕ್ಷ ಮಂದಿ ಹೊಸ ರೈತರಿಗೆ ತಲಾ 30 ಸಾವಿರ ರೂ.ನಂತೆ ಒಟ್ಟಾರೆ 3 ಸಾವಿರ ಕೋಟಿ ರೂ.ಗಳಷ್ಟು ಸಾಲ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಇಂದಿಲ್ಲಿ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ನಡೆದ ಸಹಕಾರ ಇಲಾಖೆ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ರೈತರಿಗೆ ಸಾಲ ಒದಗಿಸಲು ಸರಕಾರ ಹಾಗೂ ಬ್ಯಾಂಕುಗಳು ತಲಾ ಶೇ.50ರಷ್ಟು ಹಣವನ್ನು ಭರಿಸಲಿವೆ ಎಂದರು.

ಜುಲೈ 10ರ ಗಡುವು: ಸಹಕಾರಿ ಬ್ಯಾಂಕುಗಳಲ್ಲಿ ಕೃಷಿ ಸಾಲ ಪಡೆದಿರುವ ಒಟ್ಟು 19 ಲಕ್ಷ ಮಂದಿ ರೈತರಿಗೆ ಸಾಲಮನ್ನಾ ಯೋಜನೆ ಹಣವನ್ನು ಜುಲೈ 10 ರೊಳಗೆ ತಲುಪಿಸಲು ತೀರ್ಮಾನಿಸಿದ್ದು, ಈ ಸಂಬಂಧ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

19 ಲಕ್ಷ ಮಂದಿ ರೈತರ ಪೈಕಿ 18.19 ಲಕ್ಷಕ್ಕೂ ಅಧಿಕ ಮಂದಿ ರೈತರು ಸಾಲ ಪಡೆದ ಬಗ್ಗೆ ಮಾಹಿತಿ ನೀಡಿದ್ದು ದಾಖಲೆಗಳು ಹೊಂದಾಣಿಕೆಯಾಗಿವೆ. ಉಳಿದ 1.36 ಲಕ್ಷಕ್ಕೂ ಅಧಿಕ ಮಂದಿ ರೈತರು ಇನ್ನೂ ಆಧಾರ್, ಪಡಿತರ ಚೀಟಿ ದಾಖಲೆ ನೀಡಿಲ್ಲ. ಆ ರೈತರ ದಾಖಲೆ ಹೊಂದಾಣಿಕೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಎಲ್ಲ ರೈತರ ದಾಖಲೆ ಹೊಂದಾಣಿಕೆ ದೃಷ್ಟಿಯಿಂದ ಅಧಿಕಾರಿಗಳು ರೈತರ ಮನೆಗಳಿಗೆ ತೆರಳಿ ಖುದ್ದು ಪರಿಶೀಲಿಸಿ ಸಾಲಮನ್ನಾ ಯೋಜನೆ ವ್ಯಾಪ್ತಿಗೆ ಅವರನ್ನು ತರಲು ಸೂಚಿಸಲಾಗಿದೆ ಎಂದ ಅವರು, ಈಗಾಗಲೇ 8 ಲಕ್ಷ ಮಂದಿ ರೈತರಿಗೆ 2 ಸಾವಿರ ಕೋಟಿ ರೂ.ಗಳಷ್ಟು ಹಣವನ್ನು ಜಮಾ ಮಾಡಲಾಗಿದೆ ಎಂದರು.

ಯಾವುದೇ ಕಾರಣಕ್ಕೂ ರೈತರು ಆತಂಕಪಡುವ ಅಗತ್ಯವಿಲ್ಲ. ಕೃಷಿ ಸಾಲ ಪಡೆದಿರುವ ಎಲ್ಲ ರೈತರ ಸಾಲಮನ್ನಾ ನಿಶ್ಚಿತವಾಗಿಯೂ ಆಗಲಿದೆ ಎಂದ ಅವರು, ಈ ಸಂಬಂಧ ನೇಮಿಸಿರುವ ಸಮಿತಿಯೇ ದಾಖಲೆ ಹೊಂದಾಣಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದರು.

ತಾಲೂಕು ಕೇಂದ್ರಗಳಿಗೂ ವಿಸ್ತರಣೆ: ಬೀದಿ ವ್ಯಾಪಾರಿಗೆ ಸಾಲ ಸೌಲಭ್ಯ ಕಲ್ಪಿಸುವ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ತಾಲೂಕು ಕೇಂದ್ರಗಳಿಗೂ ವಿಸ್ತರಿಸಲು ತೀರ್ಮಾನಿಸಿದ್ದು, 8 ಲಕ್ಷ ಮಂದಿ ಬೀದಿ ಬದಿಯ ವ್ಯಾಪಾರಿಗೆ ಸಾಲ ಒದಗಿಸಲಾಗುವುದು ಎಂದು ಹೇಳಿದರು.

1 ಸಾವಿರ ರೂ.ನಿಂದ 10 ಸಾವಿರ ರೂ.ಗಳ ವರೆಗೆ ಸಾಲ ನೀಡುತ್ತಿದ್ದು, ಸಾಲ ಪಡೆಯಲು ಆಧಾರ್ ಮತ್ತು ಪಡಿತರ ಚೀಟಿ ನೀಡುವುದು ಕಡ್ಡಾಯವೆಂಬ ಷರತ್ತನ್ನು ಸಡಿಲಿಸಲು ಉದ್ದೇಶಿಸಲಾಗಿದೆ ಎಂದ ಅವರು, ನಿಯಮ ಸರಳೀಕರಣಗೊಳಿಸಿದರೆ ಬಡವರಿಗೆ ಸುಲಭವಾಗಿ ಸಾಲ ದೊರೆಯಲಿದೆ ಎಂದು ಹೇಳಿದರು.

ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸಹಕಾರಿ ಮತ್ತು ಅಪೆಕ್ಸ್ ಬ್ಯಾಂಕ್‌ಗಳ ಏಕರೂಪದ ಸಾಫ್ಟ್‌ವೇರ್ ರೂಪಿಸಲಾಗುವುದು ಎಂದ ಅವರು, ಸಹಕಾರಿ ಬ್ಯಾಂಕುಗಳಿಗೆ ವಿಧಿಸಿರುವ ಆದಾಯ ತೆರಿಗೆಯಿಂದ ವಿನಾಯಿತಿ ನೀಡಬೇಕು ಎಂದು ಕೇಂದ್ರಕ್ಕೆ ಶೀಘ್ರವೇ ಮನವಿ ಸಲ್ಲಿಸಲಾಗುವುದು ಎಂದರು.

ಆರೋಗ್ಯ ಸಚಿವ ಶಿವಾನಂದ ಪಾಟೀಲ್, ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಕೆ.ಎನ್. ರಾಜಣ್ಣ, ಸಹಕಾರ ಇಲಾಖೆ ಕಾರ್ಯದರ್ಶಿ ನಾಗಾಂಬಿಕೆ, ಪರಿಷತ್ ಉಪಸಭಾಪತಿ ಧರ್ಮೇಗೌಡ, ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ಅಪೆಕ್ಸ್ ಬ್ಯಾಂಕ್ 189 ಕೋಟಿ ರೂ.ಗಳಷ್ಟು ಲಾಭಗಳಿಸಿದ್ದು, ಆ ಪೈಕಿ 80 ಕೋಟಿ ರೂ.ಗಳಷ್ಟು ಆದಾಯ ತೆರಿಗೆ ಪಾವತಿಸಿದೆ. ಅಪೆಕ್ಸ್, ಡಿಸಿಸಿ ಬ್ಯಾಂಕುಗಳು ಸೇರಿದಂತೆ ಸಹಕಾರಿ ವಲಯದಿಂದ 200 ಕೋಟಿ ರೂ.ತೆರಿಗೆ ಪಾವತಿಸಿದ್ದು, ರೈತರಿಗೆ ಸೇವೆ ಒದಗಿಸುವ ಸಹಕಾರಿ ವಲಯಕ್ಕೆ ತೆರಿಗೆ ವಿನಾಯ್ತಿ ನೀಡಬೇಕು. ಅಲ್ಲದೆ, ಟಿಡಿಎಸ್ ಜಾರಿಯಿಂದ ಡಿಸಿಸಿ-ಅಪೆಕ್ಸ್ ಬ್ಯಾಂಕ್‌ಗಳು ನಿರೀಕ್ಷೆಯಂತೆ ಠೇವಣಿ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ’

-ಕೆ.ಎನ್.ರಾಜಣ್ಣ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News