ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ: ಬಿಜೆಪಿ ನಾಯಕರ ವಿರುದ್ಧ ದೇವೇಗೌಡ ವಾಗ್ದಾಳಿ

Update: 2019-06-24 13:25 GMT

ಬೆಂಗಳೂರು, ಜೂ.24: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡುತ್ತಿರುವ ಗ್ರಾಮ ವಾಸ್ತವ್ಯವನ್ನು ಟೀಕಿಸಿ, ಕಿರುಹೊತ್ತಿಗೆ ಬಿಡುಗಡೆ ಮಾಡಿರುವ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಕಾಮಾಲೆ ಕಣ್ಣು ಇರೋರಿಗೆ ಎಲ್ಲವೂ ಹಳದಿಯಾಗಿ ಕಾಣುತ್ತದೆ ಎಂದು ತಿರುಗೇಟು ನೀಡಿದರು.

ಸೋಮವಾರ ನಗರದ ಜೆಡಿಎಸ್ ಕಚೇರಿ(ಜೆ.ಪಿ.ಭವನ) ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಮಾಡುತ್ತಿರುವ ಗ್ರಾಮ ವಾಸ್ತವ್ಯದ ಬಗ್ಗೆ ಹಳ್ಳಿಯ ಜನರನ್ನು ಕೇಳಿ, ಅವರೇ ನಿಮ್ಮ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುತ್ತಾರೆ ಎಂದರು.

ನಾನು ಇಲ್ಲಿ ಕೂತು ಗ್ರಾಮ ವಾಸ್ತವ್ಯದ ಬಗ್ಗೆ ಹೇಳಿಕೆಗಳನ್ನು ಕೊಟ್ಟರೆ ಸರಿಯಾಗುವುದಿಲ್ಲ. ಜನರ ಬಳಿ ಹೋಗಿ ಮಾತನಾಡಿದರೆ, ಎಲ್ಲವೂ ನಿಮಗೆ ಗೊತ್ತಾಗುತ್ತದೆ ಎಂದು ಬಿಜೆಪಿ ನಾಯಕರ ವಿರುದ್ಧ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಜೊತೆ ಮುಖ್ಯಮಂತ್ರಿ ಊಟ ಮಾಡಿದ್ದಾರೆ ಎಂದು ಬಿಜೆಪಿ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಆತನೇ ಭಾರತಕ್ಕೆ ವಾಪಸ್ ಬಂದು ಎಲ್ಲ ಹೇಳುತ್ತೇನೆ ಎಂದಿದ್ದಾನೆ ಎಂದರು.

ಅವನು ಭಾರತಕ್ಕೆ ವಾಪಸ್ ಬರಲು ಅನುಮತಿ ಕೊಟ್ಟಿದ್ದಾರೆ. ಆತ ಬಂದು ಯಾರ ಯಾರ ಹೆಸರು ಹೇಳುತ್ತಾನೋ ನೋಡೋಣ. ಮುಖ್ಯಮಂತ್ರಿ ಎಷ್ಟು ತೆಗೆದುಕೊಂಡರು, ಬೇರೆಯವರು ಎಷ್ಟು ತೆಗೆದುಕೊಂಡಿದ್ದಾರೆ ಎಂಬುದನ್ನು ಬಂದು ಹೇಳಲಿ. ಆಮೇಲೆ ಮಾತನಾಡೋಣ ಎಂದು ದೇವೇಗೌಡ ಹೇಳಿದರು.

ಜೆಡಿಎಸ್ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಹೆಸರನ್ನು ಮನ್ಸೂರ್ ಖಾನ್ ವಿಡಿಯೋದಲ್ಲಿ ಉಲ್ಲೇಖಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇವೇಗೌಡ, ನಾನು ಯಾರ ಹೆಸರಿನ ಬಗ್ಗೆಯೂ ಉಲ್ಲೇಖಿಸಲು ಹೋಗುವುದಿಲ್ಲ. ಒಳ್ಳೆಯ ಅಧಿಕಾರಿಗಳನ್ನು ಒಳಗೊಂಡ ತನಿಖಾ ತಂಡ ರಚಿಸಿದ್ದಾರೆ. ಅವರು ತನಿಖೆ ಮಾಡಲಿ, ಆರೋಪಿಯು ಬಂದು ಸತ್ಯವನ್ನು ಬಾಯಿಬಿಡಲಿ ಎಂದರು.

ವಿಶ್ವನಾಥ್ ರಾಜೀನಾಮೆ ಅಂಗೀಕರಿಸಲ್ಲ: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ಸಲ್ಲಿಸಿರುವ ವಿಶ್ವನಾಥ್ ರಾಜೀನಾಮೆ ಅಂಗೀಕರಿಸಲ್ಲ ಅಂಗೀಕರಿಸುವುದಿಲ್ಲ. ಮುಂದಿನ ತಿಂಗಳು ಪಕ್ಷಕ್ಕೆ ನೂತನ ರಾಜ್ಯಾಧ್ಯಕ್ಷರ ನೇಮಕ ಮಾಡಲಾಗುವುದು. ವಿಶ್ವನಾಥ್ ಮೂಲಕವೇ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿಸಲಾಗುವುದು ಎಂದು ದೇವೇಗೌಡ ಹೇಳಿದರು.

ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮವಿದೆ. ಆದುದರಿಂದ, ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿರುವ ಎಚ್.ಡಿ.ಕುಮಾರಸ್ವಾಮಿಗೆ, ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಹೊಣೆಗಾರಿಕೆ ನೀಡಲು ಸಾಧ್ಯವಿಲ್ಲ ಎಂದು ದೇವೇಗೌಡ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News