ಜಿಂದಾಲ್‌ಗೆ ಭೂಮಿ ಮಾರಾಟ: ಸಮಗ್ರ ತನಿಖೆಗೆ ಎಸ್.ಆರ್.ಹಿರೇಮಠ್ ಆಗ್ರಹ

Update: 2019-06-24 13:30 GMT

ಬಳ್ಳಾರಿ, ಜೂ.24: ರಾಜ್ಯ ಸರಕಾರ ಜಿಂದಾಲ್ ಕಂಪನಿಗೆ ನೀಡಿರುವ ಭೂಮಿ ಹಾಗೂ ಜಿಂದಾಲ್ ರೈತರಿಂದ ಖರೀದಿಸಿರುವ ಭೂಮಿಯ ಮೂಲಕ ಕೈಗಾರಿಕಾ ಸ್ಥಾಪನೆಯ ಉದ್ದೇಶವಿದೆಯಾ ಎಂಬುದರ ಬಗ್ಗೆ ಕೂಡಲೇ ಸಮಗ್ರ ತನಿಖೆ ನಡೆಸಬೇಕು ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಸ್ಕೊ ಎಂಬ ಕಂಪನಿಯು ದಕ್ಷಿಣ ಕೊರಿಯಾದಲ್ಲಿ ಪ್ರತಿವರ್ಷ 1 ಕೋಟಿ ಮೆಟ್ರಿಕ್ ಟನ್ ಉಕ್ಕು ಉತ್ಪಾದನೆಗೆ ಕೇವಲ ಎರಡು ಸಾವಿರ ಎಕರೆ ಭೂಮಿ ಪಡೆದುಕೊಂಡಿದೆ. ಇಂಗ್ಲೆಂಡ್‌ನಲ್ಲಿ ಒಂದು ಕೋಟಿ ಮಿಲಿಯನ್ ಮೆಟ್ರಿಕ್ ಟನ್ ಉಕ್ಕು ಉತ್ಪಾದನೆಗೆ ಎರಡು ಸಾವಿರ ಎಕರೆಗಿಂತ ಕಡಿಮೆ ಭೂಮಿ ಪಡೆದಿದೆ. ಆದರೆ, ಜಿಂದಾಲ್ ಕಂಪನಿಗೆ ಕೇವಲ 1.15 ಕೋಟಿ ಮೆಟ್ರಿಕ್ ಟನ್ ಉತ್ಪಾದಿಸಲು 3667 ಎಕರೆ ಭೂಮಿ ಪಡೆಯಲು ಮುಂದಾಗಿದೆ ಎಂದು ಅಪಾದಿಸಿದರು.

ರಾಜ್ಯ ಸರಕಾರ ಜಿಂದಾಲ್‌ಗೆ ಭೂಮಿ ಮಾರಾಟ ಮಾಡಲು ಮುಂದಾಗಿರುವುದು ಜನವಿರೋಧಿಯಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ವಿವೇಚನಾ ರಹಿತವಾಗಿ ಲೀಸ್ ಕಂ ಸೇಲ್ ಒಪ್ಪಂದ ಏರ್ಪಡಿಸಿಕೊಂಡಾಗ ಮೌನವಾಗಿದ್ದ ಅಂದಿನ ಉಪ ಮುಖ್ಯಮಂತ್ರಿ ಯಡಿಯೂರಪ್ಪ ಈಗ ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

ಜಿಂದಾಲ್ ಕಂಪನಿ ಕಾನೂನು ಪಾಲನೆ ಮಾಡುತ್ತದೆ ಎನ್ನಲಾಗುತ್ತಿದೆ. ಆದರೆ, ತನ್ನ ವಿರುದ್ಧ ಅಕ್ರಮ ಅದಿರು ಸಾಗಣೆ ಆರೋಪದ ಮೇರೆಗೆ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದು ಮರೆತಿದೆ. ಮೈಸೂರು ಮಿನರಲ್ ಲಿ.ಗೆ 1,172 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಅದನ್ನು ಪಾವತಿಸುವ ಬದಲು ಎಂಎಂಎಲ್‌ನಿಂದಲೇ ನಮಗೆ 270ಕೋಟಿ ನೀಡಬೇಕು ಎಂದು ಪ್ರಕರಣ ದಾಖಲಿಸಿರುವುದು ವಿಪರ್ಯಾಸ ಎಂದು ಕಿಡಿಕಾರಿದರು.

ರಾಜ್ಯ ಸರಕಾರ ಜಿಂದಾಲ್‌ಗೆ ಭೂಮಿ ಮಾರಾಟ ಮಾಡಲು ಮುಂದಾಗಿರುವುದನ್ನು ಖಂಡಿಸಿ ಕ್ವಿಟ್ ಜಿಂದಾಲ್ ಎಂಬ ಹೋರಾಟವನ್ನು ಹಮ್ಮಿಕೊಳ್ಳಲಿದ್ದೇವೆ. ಅದಕ್ಕಾಗಿ ಎಲ್ಲ ಸಂಘಟನೆಗಳನ್ನು ಒಂದುಗೂಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಮಾವೇಶ: ಕಪ್ಪತಗುಡ್ಡದ ಅರಣ್ಯ ಪ್ರದೇಶದ ಸಂರಕ್ಷಣೆಗಾಗಿ ಜು.13 ಮತ್ತು 14 ರಂದು ಗದಗದ ತೋಂಟದಾರ್ಯ ಮಠದಲ್ಲಿ ಉಳಿಸಿ, ಬೆಳಸಿ, ಬಳಸಿ ಚಿಂತನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ಇದೇ ವೇಳೆ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News