ರಾವಲ್ಪಿಂಡಿ ಆಸ್ಪತ್ರೆ ಸ್ಫೋಟದಲ್ಲಿ ಜೈಶ್ ಮುಖ್ಯಸ್ಥನಿಗೆ ಗಾಯ?

Update: 2019-06-25 03:59 GMT

ಹೊಸದಿಲ್ಲಿ, ಜೂ.25: ಜೈಶ್ ಇ ಮುಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ ಮೂತ್ರಕೋಶ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ರಾವಲ್ಪಿಂಡಿ ಆಸ್ಪತ್ರೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಸೇನೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ ಘಟನೆಯಲ್ಲಿ ಗಾಯಗೊಂಡವರಲ್ಲಿ ಮಸೂದ್ ಕೂಡಾ ಸೇರಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸೇನೆ ಬಾಯಿ ಬಿಟ್ಟಿಲ್ಲ.

ಭಾರತದ ಗುಪ್ತಚರ ವಿಭಾಗ ಕೂಡಾ ಇದನ್ನು ದೃಢಪಡಿಸುವ ಖಚಿತ ಮಾಹಿತಿಯನ್ನು ಹೊಂದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ, ಅದರಲ್ಲೂ ಮುಖ್ಯವಾಗಿ ಟೆಲಿಗ್ರಾಂ ಚಾನಲ್‌ನಲ್ಲಿ, ಗುಪ್ತಚರ ವಿಭಾಗದ ಅಧಿಕಾರಿಯೊಬ್ಬರು, "ಘಟನೆಯಲ್ಲಿ ಗಾಯಗೊಂಡ 10 ಮಂದಿಯಲ್ಲಿ ಮಸೂದ್ ಅಝರ್ ಕೂಡಾ ಸೇರಿದ್ದಾನೆಎಂಬ ಮಾಹಿತಿ ಸಾಮಾನ್ಯ ವಿಶ್ವಾಸಾರ್ಹ. ಎಲ್ಲ ಮಾಧ್ಯಮಗಳನ್ನು ಅಧಿಕಾರಿಗಳು ನಿಷೇಧಿಸಿದ್ದಾರೆ" ಎಂದು ಹೇಳಿದ್ದಾರೆ.

ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಮಸೂದ್ ಅಝರ್ ಈ ಆಸ್ಪತ್ರೆಗೆ ನಿಯತವಾಗಿ ಡಯಾಲಿಸಿಸ್‌ಗಾಗಿ ಭೇಟಿ ನೀಡುತ್ತಾನೆ. ರವಿವಾರ ತಡರಾತ್ರಿ ಹಲವು ಪಾಕಿಸ್ತಾನಿ ಟ್ವಿಟ್ಟರ್ ಬಳಕೆದಾರರು, ಸ್ಫೋಟ ಕುರಿತ ವಿಡಿಯೊ ಅಪ್‌ಲೋಡ್ ಮಾಡಿದ್ದು, ಇದರ ಪ್ರಕಾರ 10 ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಪಿಟಿಎಂ ಕಾರ್ಯಕರ್ತ ಹಾಗೂ ಮಾನವಹಕ್ಕುಗಳ ಹೋರಾಟಗಾರ ಎಂದು ಹೇಳಿಕೊಂಡಿರುವ ಅಶನ್ ಉಲ್ಲಾ, "ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ. 10 ಗಾಯಾಳುಗಳನ್ನು ತುರ್ತುಚಿಕಿತ್ಸಾ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಜೈಶ್-ಇ- ಮುಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್ ಕೂಡಾ ದಾಖಲಾಗಿದ್ದಾನೆ. ಸೇನೆ ಮಾಧ್ಯಮವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ಘಟನೆಯನ್ನು ವರದಿ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ" ಎಂಬ ಸೂಚನೆಯೊಂದಿಗೆ ವಿಡಿಯೊ ಅಪ್‌ಲೋಡ್ ಮಾಡಿದ್ದಾರೆ. ರಸ್ತೆಯಲ್ಲಿ ವಾಹನ ಸಂಚಾರ ಇದ್ದರೂ, ಆಸ್ಪತ್ರೆಯಿಂದ ದಟ್ಟವಾದ ಹೊಗೆ ಹೊರಹೊಮ್ಮುತ್ತಿರುವುದು ವೀಡಿಯೊದಲ್ಲಿ ಕಾಣಿಸುತ್ತದೆ.

ಜಮ್ಮು ಕಾಶ್ಮೀರದಲ್ಲಿ ನಡೆದ ಪುಲ್ವಾಮಾ ದಾಳಿ ಘಟನೆಗೆ ಪ್ರತೀಕಾರವಾಗಿ ಬಾಲಾಕೋಟ್‌ನಲ್ಲಿರುವ ಜೈಶ್ ಉಗ್ರರ ಶಿಬಿರಗಳ ಮೇಲೆ ಫೆಬ್ರವರಿ 26ರಂದು ವಾಯುದಾಳಿ ನಡೆದಿತ್ತು. ರಾವಲ್ಪಿಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣದಿಂದ ಅಝರ್ ಬಚಾವ್ ಆಗಿದ್ದ. ಬಾಲಕೋಟ್ ದಾಳಿ ಬಳಿಕ ಪಾಕಿಸ್ತಾನ ಸೇನೆ ಅಝರ್‌ನನ್ನು ಸುರಕ್ಷಿತ ಪ್ರದೇಶಕ್ಕೆ ವರ್ಗಾಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News