ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ: ಚಾಮರಾಜನಗರ ಬಂದ್ ಭಾಗಶಃ ಯಶಸ್ವಿ

Update: 2019-06-25 12:24 GMT

ಚಾಮರಾಜನಗರ, ಜೂ.25: ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣವನ್ನು ಎಸ್.ಐ.ಟಿ ತನಿಖೆಗೆ ನೀಡಲು ಆಗ್ರಹಿಸಿ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ದಲಿತ ಸಂಘಟನೆಗಳು ಮತ್ತು ಪ್ರಗತಿ ಪರ ಸಂಘಟನೆಗಳು ಕರೆ ನೀಡಿದ್ದ ಸ್ವಯಂ ಘೋಷಿತ ಬಂದ್ ಭಾಗಶಃ ಯಶಸ್ವಿಯಾಗಿದೆ.

ಜೂನ್ 3 ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಹೊರವಲಯದ ಕೆಬ್ಬೆಕಟ್ಟೆ ಶನೇಶ್ವರ ದೇವಾಲಯದಲ್ಲಿ ನಡೆದ ದಲಿತ ಯುವಕನ ಬೆತ್ತಲೆ ಮೆರವಣಿಗೆ, ಹಲ್ಲೆ ಹಾಗೂ ಸಂತೇಮರಹಳ್ಳಿಯಲ್ಲಿ 2015 ರಲ್ಲಿ ನಡೆದ ದಲಿತರಿಬ್ಬರ ಬರ್ಬರ ಹತ್ಯೆ ಪ್ರಕರಣ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳು ಚಾಮರಾಜನಗರ ಬಂದ್ ಕರೆ ನೀಡಿದ್ದು, ಜಿಲ್ಲಾ ಕೇಂದ್ರ ಭಾಗಶಃ ಸ್ಥಬ್ದವಾಗಿತ್ತು. ಇದೇ ವೇಳೆ ಎಸ್ಡಿಪಿಐ ಕಾರ್ಯಕರ್ತರು ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಹಲ್ಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಬಂದ್ ಹಿನ್ನೆಲೆಯಲ್ಲಿ ಕೆಲ ವರ್ತಕರು ಅಂಗಡಿ ಮುಂಗಟ್ಟುಗಳು ಬಂದ್ ಆಗಿತ್ತು. ಖಾಸಗಿ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಕೆಎಸ್ಆರ್ಟಿಸಿ ಬಸ್ ಮಧ್ಯಾಹ್ನದ ತನಕ ಸಂಚರಿಸಲಿಲ್ಲ.

ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಜಮಾಯಿಸಿದ ದಲಿತ ಪರ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ಜಿಲ್ಲೆಯಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ, ಎಸ್ಐಟಿ ತನಿಖೆಗೆ ಆಗ್ರಹಿಸಿದರು. ಅಲ್ಲದೇ, ಸಂತೇಮರಹಳ್ಳಿಯಲ್ಲಿ 2015 ರಲ್ಲಿ ನಡೆದ ದಲಿತರಿಬ್ಬರ ಬರ್ಬರ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದರು.

ಬಳಿಕ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ, ಜಿಲ್ಲೆಯಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಹತ್ಯೆಗಳನ್ನು ಸಂಪೂರ್ಣವಾಗಿ ಹತ್ತಿಕ್ಕಲು ಸರ್ಕಾರ ವಿಶೇಷ ಗಮನ ಹರಿಸಬೇಕು. ಗುಂಡ್ಲುಪೇಟೆಯ ದಲಿತ ಯುವಕನ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ತಪ್ಪಿತಸ್ಥರನ್ನು ಜಿಲ್ಲೆಯಿಂದ ಗಡಿ ಪಾರು ಮಾಡಬೇಕೆಂದು ಒಕ್ಕೂರಲಿನಿಂದ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬಂದ್ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ.ಆನಂದ್ ಕುಮಾರ್ ಮಾರ್ಗದರ್ಶನದಲ್ಲಿ ಡಿ.ವೈ.ಎಸ್ ಪಿ ಜಯಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸಂಜೆಯಾಗುತ್ತಿದ್ದಂತೆ ಬಸ್ ಸಂಚಾರ ಎಂದಿನಂತೆ ಆರಂಭಗೊಂಡಿತು. ಕಾನೂನು ಸುವ್ಯವಸ್ಥೆಗಾಗಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟೆರ್ ಮತ್ತು ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಯಿತು.

ದಲಿತ ಸಂಘಟನೆಗಳ ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ, ಡಿ.ಎಸ್.ಎಸ್. ಸಂಚಾಲಕ ನಾಗರಾಜು, ನಿಜ ಧ್ವನಿ ಗೋವಿಂದರಾಜು, ರಾಮಸಮುದ್ರ ಸುರೇಶ್, ಮಾಡ್ರಹಳ್ಳಿ ಸುಭಾಷ್, ಪರ್ವತರಾಜು, ಎಸ್ಡಿಪಿಐ ಜಿಲ್ಲಾಧ್ಯಕ್ಷ ಹಾಗೂ ನಗರಸಭೆಯ ಸದಸ್ಯ ಅಬ್ರಾರ್ ಅಹಮದ್ ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News