ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿಯುತ್ತಿದೆ: ಗಂಭೀರ ಗಮನ ನೀಡಲು ಸರಕಾರಕ್ಕೆ ಎನ್.ಕೆ.ಸಿಂಗ್ ಸೂಚನೆ

Update: 2019-06-25 16:07 GMT

ಬೆಂಗಳೂರು, ಜೂ.25: ಕರ್ನಾಟಕದಲ್ಲಿ ಬೆಂಗಳೂರಿನಂತಹ ಮೆಟ್ರೋ ಪಾಲಿಟನ್ ಸಿಟಿ ಹಾಗೂ ಬಡತನದಿಂದ ಕೂಡಿರುವ ಎರಡು ರಾಜ್ಯಗಳು ಕಾಣುತ್ತಿವೆ ಎಂದು ಹದಿನೈದನೆ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಹಣಕಾಸು ಆಯೋಗದ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರದ ತಲಾದಾಯಕ್ಕಿಂತಲೂ ಕರ್ನಾಟಕದ ತಲಾದಾಯ ಅಧಿಕವಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿಯುತ್ತಿದೆ ಎಂಬ ಅಂಶವನ್ನು ಮುಖ್ಯಮಂತ್ರಿ ಹಾಗೂ ಸಚಿವರ ಗಮನಕ್ಕೆ ತಂದಿದ್ದೇವೆ. ಈ ಸಂಬಂಧ ಗಂಭೀರ ಗಮನ ನೀಡಬೇಕು ಎಂದು ಸೂಚಿಸಿದ್ದೇವೆಂದರು. ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಕಾಯ್ದೆ ಜಾರಿ ಮಾಡಿದೆ. ಇದರ ಅಡಿಯಲ್ಲಿನ ಅಂಕಿ ಸಂಖ್ಯೆಗಳು ನೋಡಿದರೆ ಉತ್ತಮವಾಗಿದೆ. ಆದರೆ, ದಿನದಿಂದ ದಿನಕ್ಕೆ ಸಾಲದ ಪ್ರಮಾಣ ಅಧಿಕವಾಗುತ್ತಿದೆ. ಹಣಕಾಸು ನಿರ್ವಹಣೆಯಲ್ಲಿ ರಾಜ್ಯ ಸರಕಾರ ವಿಶ್ವಾಸಪೂರ್ಣವಾಗಿದೆ ಎಂದ ಅವರು, ಅಭಿವೃದ್ಧಿ ಸೂಚ್ಯಂಕದಲ್ಲಿ ಉತ್ತಮವಾಗಿದ್ದರೂ, ಶಿಕ್ಷಣ, ಮಕ್ಕಳು ಹಾಗೂ ರಕ್ತ ಹೀನತೆಯಂತಹ ಗಂಭೀರ ವಿಷಯಗಳಲ್ಲಿ ಕುಸಿದಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅಂದಾಜು ಶೇ.21 ರಷ್ಟು ಬಡತನವಿದೆ. ಸರಕಾರಗಳು ಎಷ್ಟು ಪ್ರಮಾಣದಲ್ಲಿ ನೀರಾವರಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿ ಮಾಡಿದೆ, ಅದು ಎಷ್ಟು ಪ್ರಮಾಣ ಜಾರಿಯಾಗಿದೆ ಎಂಬುದರ ಕಡೆ ಗಮನ ನೀಡಬೇಕು. ಕೃಷಿ ಕ್ಷೇತ್ರದಲ್ಲಿ ಬೆಳವಣಿಗೆ ಕಂಡುಬಂದಿಲ್ಲ ಎಂದ ಅವರು, ಮುಂದಿನ 7-8 ವರ್ಷಗಳಲ್ಲಿ ಇಡೀ ಕೃಷಿ ಕ್ಷೇತ್ರದ ಬೆಳವಣಿಗೆಯೇ ಕುಸಿಯುವ ಅಥವಾ ನಿಂತು ಹೋಗುವ ಸಂಭವವಿದೆ ಎಂದು ಎಚ್ಚರಿಸಿದರು.

ಬೆಂಗಳೂರು ನಗರದಲ್ಲಿ ಎಷ್ಟು ಆದಾಯ ಸಿಗುತ್ತದೆ ಎಂಬುದು ಮುಖ್ಯವಲ್ಲ, ರೈತರಿಗೆ ಎಷ್ಟು ಆದಾಯ ಸಿಗುತ್ತಿದೆ ಎಂಬುದು ಮುಖ್ಯವಾಗಬೇಕು ಎಂದ ಅವರು, ದೇಶದ ಎಲ್ಲ ರಾಜ್ಯಗಳಲ್ಲಿಯೂ ಬರಗಾಲವಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರಕಾರ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡಬೇಕು. ಇಲ್ಲಿ ಸುಮಾರು ಶೇ.33 ರಷ್ಟು ನೀರಾವರಿ ಕೃಷಿ ಭೂಮಿಯಿದ್ದು, ಅದನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ನೀರು ಉಳಿಸುವ ಕಡೆಗೆ ಕ್ರಮ ಕೈಗೊಳ್ಳಬೇಕು. ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಮಳೆ ನೀರಿನ ಕೊಯ್ಲು ಸೇರಿದಂತೆ ಹಲವು ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು. ಅಲ್ಲದೆ, ನೀರಿನ ಮಿತ ಬಳಕೆ ಸಂಬಂಧ ಯೋಜನೆ ರೂಪಿಸಬೇಕಾಗಿದೆ ಎಂದು ಸಚಿವರಿಗೆ ಹಾಗೂ ಮುಖ್ಯಮಂತ್ರಿಗೆ ಸೂಚಿಸಿದ್ದೇವೆ ಎಂದು ಹೇಳಿದರು.

ವ್ಯಾಟ್ ಇದ್ದ ಸಂದರ್ಭದಲ್ಲಿ ತೆರಿಗೆ ಜಾಸ್ತಿ ಬರುತ್ತಿತ್ತು. ಆದರೆ, ಜಿಎಸ್ಟಿ ಜಾರಿಯಾದ ಬಳಿಕ ತೆರಿಗೆ ಕಡಿಮೆಯಾಗಿದೆ ಎಂದು ಸರಕಾರ ಹೇಳಿದೆ. ಆದರೆ, ಇದು ಒಂದು ರಾಜ್ಯದಲ್ಲಿಯೇ ಅಲ್ಲ, ಇಡೀ ದೇಶದಲ್ಲಿ ಇದೆ. ಹೀಗಾಗಿ, ಹೊಂದಾಣಿಕೆ ಇರಬೇಕು ಎಂದ ಅವರು, ಕೇಂದ್ರ ಸರಕಾರದ ಯೋಜನೆಗಳಿಗೆ ನೀಡುವ ಅನುದಾನವನ್ನು ಇಳಿಕೆ ಮಾಡಬಾರದು ಎಂದರು.

ರಾಜ್ಯದ ವಿದ್ಯುತ್‌ಗೆ ಸಂಬಂಧಿಸಿದ ಸಬ್ಸಿಡಿಗೆ ನೀಡುವ ಹಣ 12 ಸಾವಿರ ಕೋಟಿ ರೂ.ಗಳಷ್ಟು ಬಜೆಟ್‌ನಲ್ಲಿದೆ. ಈ ಸಂಬಂಧ ಏನು ಮಾಡಬೇಕು ಎಂಬುದನ್ನು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಸಮಿತಿ ಸದಸ್ಯ ಅನೂಪ್ ಸಿಂಗ್ ಮಾತನಾಡಿ, ರಾಜ್ಯ ಸರಕಾರದಲ್ಲಿ ಇದೀಗ ಜಿಡಿಪಿಗಿಂತ ಶೇ.20 ರಷ್ಟು ಕಡಿಮೆ ಪ್ರಮಾಣದ ಸಾಲವಿದೆ. ಆದರೆ, ಮುಂದಿನ 5-10 ವರ್ಷಗಳಲ್ಲಿ ವೆಚ್ಚದ ಹೊರೆ ಅಧಿಕವಾಗಲಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಸರಕಾರಗಳು ತಮ್ಮ ಸ್ವಂತ ಖರ್ಚಿನಲ್ಲಿ ಎಷ್ಟು ಸಾಧ್ಯವೋ ಅಷ್ಟೇ ಖರ್ಚು ಮಾಡಬೇಕು. ಬೇರೆಯವರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತರಾಗಬಾರದು ಎಂದು ಹೇಳಿದರು.

ಸಭೆಯಲ್ಲಿ ಸದಸ್ಯರಾದ ಅಜಯ್ ನಾರಾಯಣ್, ರಮೇಶ್ ಚಂದ್, ಅರವಿಂದ ಮೆಹ್ತಾ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News