ತೆರಿಗೆ ಇಲಾಖೆಯ ಈ ಆದೇಶದ ವಿರುದ್ಧ ಯೋಧರು ಗರಂ

Update: 2019-06-26 03:47 GMT

ಹೊಸದಿಲ್ಲಿ, ಜೂ.26: ಸೇನಾ ಸಿಬ್ಬಂದಿಗೆ ನೀಡುವ ಅಂಗವೈಕಲ್ಯ ಪಿಂಚಣಿಗೆ ಕೂಡಾ ತೆರಿಗೆ ಅನ್ವಯವಾಗುತ್ತದೆ ಎಂಬ ತೆರಿಗೆ ಇಲಾಖೆಯ ಆದೇಶಕ್ಕೆ ಯೋಧರು ಹಾಗೂ ನಿವೃತ್ತ ಯೋಧರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಸೇವೆಯ ಅವಧಿಯಲ್ಲಿ ಸಂಭವಿಸಿದ ಘಟನೆಗಳಿಂದ ಅಂಗವೈಕಲ್ಯ ಆಗಿ, ಸೇವೆಯಿಂದ ಹೊರಹೋದ ಪ್ರಕರಣಗಳಿಗಷ್ಟೇ ಇದು ಅನ್ವಯಿಸುವುದಿಲ್ಲ ಎಂದು ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಸೋಮವಾರ ಈ ಸಂಬಂಧ ಸುತ್ತೋಲೆ ಹೊರಡಿಸಿ, ಸೇನೆಯಲ್ಲಿ ಸೇವೆ ಸಲ್ಲಿಸುವ ವೇಳೆ ಆಗುವ ಅಂಗವೈಕಲ್ಯದಿಂದಾಗಿ ಸೇವೆಯಲ್ಲಿ ಮುಂದುವರಿಯುವುದು ಸಾಧ್ಯವಾಗದಿದ್ದ ಪ್ರಕರಣಗಳಲ್ಲಿ ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಯ ಸಿಬ್ಬಂದಿಗೆ ತೆರಿಗೆ ವಿನಾಯ್ತಿ ಸೌಲಭ್ಯ ಮುಂದುವರಿಯಲಿದೆ" ಎಂದು ಸ್ಪಷ್ಟಪಡಿಸಿದೆ.

ಆದರೆ ಈ ತೆರಿಗೆ ವಿನಾಯ್ತಿ ಸೌಲಭ್ಯವು ವಯೋಮಿತಿ ತಲುಪಿ ನಿವೃತ್ತರಾದವರಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದೆ. ಅಂದರೆ ಅಂಗವೈಕಲ್ಯಕ್ಕೆ ಒಳಗಾಗಿಯೂ ಸೇವೆಯಲ್ಲಿ ಮುಂದುವರಿದು ಸೇವಾವಧಿ ಪೂರ್ಣಗೊಳಿಸಿದ ಸಿಬ್ಬಂದಿಗೆ ನೀಡಲಾಗುತ್ತಿರುವ ಅಂಗವೈಕಲ್ಯ ಪಿಂಚಣಿಗೆ ತೆರಿಗೆ ವಿನಾಯ್ತಿ ಇರುವುದಿಲ್ಲ.

ಗರಿಷ್ಠ ವಯೋಮಿತಿ ತಲುಪಿ ನಿವೃತ್ತರಾದ ಅಂಗವಿಕಲ ಯೋಧರಿಗೆ ನೀಡಲಾಗುತ್ತಿದ್ದ ಪಿಂಚಣಿಗೆ ಈ ಮೊದಲು ಯಾವ ತೆರಿಗೆಯೂ ಇರಲಿಲ್ಲ. ಸಶಸ್ತ್ರಪಡೆ ಯೋಧರಿಗೆ ನೀಡಲಾಗುತ್ತಿದ್ದ ಸೌಲಭ್ಯವನ್ನು ಕಡಿತಗೊಳಿಸುವ ಕ್ರಮ ಇದು ಎಂದು ಸೇನಾ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಈ ಆದೇಶ ಯಾವ ದಿನದಿಂದ ಜಾರಿಗೆ ಬರುತ್ತದೆ ಎಂಬ ಬಗ್ಗೆ ಸುತ್ತೋಲೆಯಲ್ಲಿ ಮಾಹಿತಿ ಇಲ್ಲ. ಇದು ಪೂರ್ವಾನ್ವಯವಾಗಿ ಜಾರಿಗೆ ಬರುತ್ತದೆಯೇ ಅಥವಾ ಮುಂದಿನ ದಿನಾಂಕದಿಂದ ಜಾರಿಗೆ ಬರುತ್ತದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. "ಹಣಕಾಸು ಸಚಿವಾಲಯ ಹಾಗೂ ಸಿಬಿಡಿಟಿ ಹಾಲಿ ಇರುವ ನಿಯಮಾವಳಿಯನ್ನು ಈಗಾಗಲೇ ಸಲ್ಲಿಕೆಯಾಗಿರುವ ಕೆಲ ಮನವಿಗಳ ಹಿನ್ನೆಲೆಯಲ್ಲಿ ಸ್ಪಷ್ಟಪಡಿಸುತ್ತಿದ್ದೇವೆ ಅಥವಾ ವಿಶ್ಲೇಷಿಸುತ್ತಿದ್ದೇವೆ ಎಂದು ಹೇಳಿವೆ...ಈ ನಡೆ ಕುಚೋದ್ಯದ್ದು" ಎಂದು ನಿವೃತ್ತ ಯೋಧರೊಬ್ಬರು ಹೇಳಿದ್ದಾರೆ.

ಆದರೆ ಈ ಅಂಗವೈಕಲ್ಯ ಪಿಂಚಣಿ ದುರ್ಬಳಕೆಯಾಗುತ್ತಿರುವ ಪ್ರಕರಣಗಳೂ ಇವೆ. ಕೆಲ ಹಿರಿಯ ಸೇನಾ ಅಧಿಕಾರಿಗಳು ಅಧಿಕ ಪಿಂಚಣಿ ಪಡೆಯುವ ಸಲುವಾಗಿ ನಿವೃತ್ತಿಗೆ ಸ್ವಲ್ಪ ಕಾಲ ಮೊದಲು ಅಂಗವೈಕಲ್ಯ ಪ್ರಮಾಣಪತ್ರವನ್ನು ಪಡೆಯುತ್ತಿದ್ದಾರೆ ಎಂಬ ಅರೋಪವಿದೆ. ಏಳನೇ ವೇತನ ಆಯೋಗ ಕೂಡಾ ಅಂಗವೈಕಲ್ಯ ಪಿಂಚಣಿ ಪ್ರಕರಣಗಳು ಹೆಚ್ಚುತ್ತಿರುವುದನ್ನು ಪ್ರಶ್ನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News