ಬೆಂಕಿ ಅವಘಡ: ಪ್ರಾಣದ ಹಂಗು ತೊರೆದು ಮೂವರ ಜೀವ ರಕ್ಷಿಸಿದ ಮುಹಮ್ಮದ್ ಝೈದ್

Update: 2019-06-26 12:23 GMT

ಹುಬ್ಬಳ್ಳಿ, ಜೂ.26: ಇಲ್ಲಿನ ಗೋಕುಲ ರಸ್ತೆಯ ಮದನಿ ಕಾಲನಿಯ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಉಂಟಾದ ಬೆಂಕಿ ಅವಘಡದ ಸಂದರ್ಭ ತನ್ನ ಪ್ರಾಣದ ಹಂಗು ತೊರೆದು ಮೂವರನ್ನು ರಕ್ಷಿಸಿದ ಯುವಕನೋರ್ವನ ಸಾಹಸ ಇದೀಗ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.

ಮುಹಮ್ಮದ್ ಝೈದ್ ಠಾಣೆದಾರ್ ಈ ಸಾಹಸಿ ಯುವಕ.

ಘಟನೆ ವಿವರ: ರವಿವಾರ(ಜೂ.23) ಮಧ್ಯಾಹ್ನ ಗೋಕುಲ ರಸ್ತೆಯ ಮದನಿ ಕಾಲನಿಯಲ್ಲಿನ ಎರಡು ಮಹಡಿಗಳ ಕಟ್ಟಡವೊಂದರ ಮೊದಲನೆ ಮಹಡಿಯಲ್ಲಿ ಈ ಬೆಂಕಿ ಅವಘಡ ಸಂಭವಿಸಿತ್ತು. ಶಬೀರ್ ಮುಲ್ಲಾ ಎಂಬವರ ಮನೆಯ ಅಡುಗೆ ಕೋಣೆಯಲ್ಲಿ ಗ್ಯಾಸ್ ಸಿಲಿಂಡರ್ ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಗೆ ಮನೆಯೊಳಗೆ ವ್ಯಾಪಿಸಿದ್ದು, ಮನೆಮಂದಿ ಹೊರಬರಲಾರದೆ ರಕ್ಷಣೆಗಾಗಿ ಬೊಬ್ಬೆ ಹಾಕುತ್ತಿದ್ದರು. ಈ ವೇಳೆ ಅಪಾಯವನ್ನು ಲೆಕ್ಕಿಸದೆ ಮನೆಯೊಳಗೆ ನುಗ್ಗಿದ ಮುಹಮ್ಮದ್ ಝೈದ್ ಸಂಕಷ್ಟಕ್ಕೆ ಸಿಲುಕಿದ್ದ ಮೂವರನ್ನು ಮನೆಯೊಳಗಿನಿಂದ ರಕ್ಷಿಸಿ ಸುರಕ್ಷಿತವಾಗಿ ಹೊರತಂದಿದ್ದಾರೆ.

ಮುಹಮ್ಮದ್ ಝೈದ್ ಅವರ ಈ ಸಾಹಸಕ್ಕೆ ಸಾರ್ವಜನಿಕರು, ಅಗ್ನಿಶಾಮಕ ದಳ, ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘‘ಬೆಂಕಿ ಅವಘಡಕ್ಕೆ ಸಿಲುಕಿದ್ದ ಶಬೀರ್ ಮುಲ್ಲಾರ ಮನೆಯಿಂದ ಪ್ರಾಣ ರಕ್ಷಣೆಗಾಗಿ ಬೊಬ್ಬೆ ಕೇಳಿಬರುತ್ತಿತ್ತು. ಆದರೆ ಮನೆಯೊಳಗೆ ಎಷ್ಟು ಮಂದಿ ಇದ್ದಾರೆ ಎಂಬುದು ಗೊತ್ತಿರಲಿಲ್ಲ. ಅಷ್ಟರಲ್ಲಿ ಪೊಲೀಸರೂ ಸ್ಥಳಕ್ಕೆ ಆಗಮಿಸಿದ್ದರು. ಬೆಂಕಿ ದುರಂತದಂತಹ ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯ ಹೇಗೆ ಮಾಡಬೇಕು ಎಂಬುದರ ಬಗ್ಗೆ ನಾನು ಎಚ್.ಆರ್.ಎಸ್. ಸಂಸ್ಥೆಯಲ್ಲಿ ತರಬೇತಿ ಪಡೆದಿದೆ. ಅದು ಸಂಕಷ್ಟಕ್ಕೆ ಸಿಲುಕಿದ್ದವರ ರಕ್ಷಣೆಗೆ ಧೈರ್ಯದಿಂದ ಮುನ್ನುಗ್ಗಲು ನೆರವಾಯಿತು’’ ಎಂದು ಘಟನೆ ಕುರಿತಂತೆ ಮುಹಮ್ಮದ್ ಝೈದ್ ವಿವರಿಸುತ್ತಾರೆ.

*ಝೈದ್ ಅವರ ಸಾಹಸ ಪ್ರಶಂಸನೀಯ
‘‘ಮುಹಮ್ಮದ್ ಝೈದ್ ಅವರ ಸಕಾಲಿಕ ಸಾಹಸ ಮೆಚ್ಚುವಂಥದ್ದು. ಅಡುಗೆ ಅನಿಲ ಸೋರಿಕೆಯಂತಹ ಅವಘಡದಿಂದ ಬೆಂಕಿ ಧಗಧಗ ಉರಿಯುತ್ತಿದ್ದ ಸಂದರ್ಭ ಧೈರ್ಯವಾಗಿ ಮನೆಯೊಳಗೆ ಪ್ರವೇಶಿಸಿ ಒಳಗಿದ್ದವರನ್ನು ಸುರಕ್ಷಿತವಾಗಿ ಹೊರತಂದಿದ್ದಾರೆ. ಹತ್ತಿ ಬಟ್ಟೆಯನ್ನು ಒದ್ದೆ ಮಾಡಿಕೊಡು ಅವರು ಮನೆಯೊಳಗೆ ಪ್ರವೇಶಿಸಿದ್ದರು. ಅವರ ಸಮಯಪ್ರಜ್ಞೆ ಸಾಹಸಿ ಮನೋಭಾವ ಯುವಕರಿಗೆ ಮಾದರಿ’’ ಎಂದು ಪ್ರತ್ಯಕ್ಷದರ್ಶಿ ಗೋಕುಲ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಡಿ.ಪಿ.ನಿಂಬಾಳ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News