‘ಮತ ಮೋದಿಗೆ ಹಾಕ್ತೀರಿ, ಸಮಸ್ಯೆಗಳನ್ನು ನನ್ನ ಹತ್ತಿರ ತರ್ತೀರಿ’

Update: 2019-06-26 12:54 GMT

ರಾಯಚೂರು, ಜೂ. 26: ‘ಮತ ಮೋದಿಗೆ ಹಾಕ್ತೀರಿ, ಸಮಸ್ಯೆಗಳನ್ನು ನನ್ನ ಹತ್ತಿರ ತರ್ತೀರಿ. ನೀವು ಹೀಗೆ ಪ್ರತಿಭಟನೆ ಮುಂದುವರಿಸಿದರೆ ಲಾಠಿ ಪ್ರಹಾರ ನಡೆಸಲು ಆದೇಶ ಕೊಡಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಜಿಲ್ಲೆ ಮಾನ್ವಿ ತಾಲೂಕಿನ ಕರೇಗುಡ್ಡಕ್ಕೆ ಗ್ರಾಮ ವಾಸ್ತವ್ಯಕ್ಕೆ ಬಸ್ಸಿನಲ್ಲಿ ತೆರಳುತ್ತಿದ್ದ ವೇಳೆ ಯರಮರಸ್ ಸರ್ಕೀಟ್‌ಹೌಸ್ ಬಳಿ ತುಂಗಭದ್ರಾ ನೀರು ನಿರ್ವಹಣಾ ಕಾರ್ಮಿಕರ ಬಾಕಿ ವೇತನ, ವೈಟಿಪಿಎಸ್‌ನಿಂದ ಕೈಬಿಟ್ಟ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕಾರ್ಮಿಕರು ರಸ್ತೆ ತಡೆ ನಡೆಸುತ್ತಿದ್ದರು.

ಈ ವೇಳೆ ಕಾರ್ಮಿಕರ ರಸ್ತೆ ತಡೆ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕುಮಾರಸ್ವಾಮಿ, ಪ್ರತಿಭಟನಾಕಾರರ ವಿರುದ್ಧ ಹರಿಹಾಯ್ದಿದ್ದಾರೆ. ಏರುಧ್ವನಿಯಲ್ಲಿ ಕಾರ್ಮಿಕರು ಘೋಷಣೆ ಕೂಗಿದ್ದರಿಂದ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ. ಸ್ಥಳದಲ್ಲೆ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ, ಸಿಎಂ ಮನವೊಲಿಸಿ ನಾನು ಕಾರ್ಮಿಕರ ಬಳಿ ಮಾತನಾಡುವೆ. ನೀವು ಬಸ್ಸಿನಲ್ಲಿಯೆ ಇರಿ ಎಂದು ಕಾರ್ಮಿಕರ ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ, ಕಾರ್ಮಿಕರು ಸಿಎಂ ಖಚಿತ ಭರವಸೆ ನೀಡಬೇಕೆಂದು ಪಟ್ಟುಹಿಡಿದ್ದಾರೆ. ‘ಶೀಘ್ರವೇ ಈ ಸಂಬಂಧ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುವುದು’ ಎಂದು ಸಿಎಂ ಭರವಸೆ ಹಿನ್ನೆಲೆಯಲ್ಲಿ ಕಾರ್ಮಿಕರ ಪ್ರತಿಭಟನೆ ಕೈಬಿಟ್ಟಿದ್ದಾರೆ.

ಸಮಸ್ಯೆ ಪರಿಹಾರ: ವೈಟಿಪಿಎಸ್ ಕಾರ್ಮಿಕರ ಸಮಸ್ಯೆ ಬಗ್ಗೆ ಮುಖಂಡರ ಜತೆ ಚರ್ಚಿಸಿದ್ದು ಕಾಲಾವಕಾಶ ಕೋರಿದ್ದೆ. ಆದರೂ ರಸ್ತೆ ತಡೆಸಿದ್ದರಿಂದ ಆಕ್ರೋಶದ ಪ್ರತಿಕ್ರಿಯೆ ನೀಡಬೇಕಾಯಿತು. ಆದರೆ, ಈ ವಿಷಯವನ್ನು ಬಿಜೆಪಿ ರಾಜಕೀಯಕ್ಕೆ ಬಳಕೆ ಮಾಡುತ್ತಿರುವುದು ಸಲ್ಲ ಎಂದು ಕುಮಾರಸ್ವಾಮಿ ಆಕ್ಷೇಪಿಸಿದರು.

ವೈಟಿಪಿಎಸ್ ಸಮಸ್ಯೆ ನನ್ನ ಅವಧಿಯಲ್ಲಿನ ನಿರ್ಧಾರದಿಂದ ಆದ ಸಮಸ್ಯೆಯಲ್ಲ. ಆದರೂ ಸಮಸ್ಯೆಗೆ ಪರಿಹಾರ ಹುಡುಕುವುದಾಗಿ ಸಮಾಧಾನ ಹೇಳಿ ಕಳುಹಿಸಿದ್ದೇನೆ. ಶೀಘ್ರವೇ ಸಭೆ ಕರೆದು ಕಾರ್ಮಿಕರ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.

ಆ ಬಳಿಕ ಪೊಲೀಸರು ಕಾರ್ಮಿಕರ ಗುಂಪನ್ನು ಚದುರಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕರೇಗುಡ್ಡ ಗ್ರಾಮಕ್ಕೆ ಗ್ರಾಮ ವಾಸ್ತವ್ಯಕ್ಕೆ ತೆರಳಲು ಅವಕಾಶ ಕಲ್ಪಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

‘ಸಾಮಾನ್ಯವಾಗಿ ನಾನು ತಾಳ್ಮೆ ಕಳೆದುಕೊಳ್ಳುವುದಿಲ್ಲ. ಎಲ್ಲರೊಂದಿಗೂ ಪ್ರೀತಿಯಿಂದಲೇ ಮಾತುಕತೆ ನಡೆಸುತ್ತೇನೆ. ಜನಸ್ಪಂದನಾ ಕಾರ್ಯಕ್ರಮದಲ್ಲಿ ಅರ್ಜಿ ಕೊಡಲು ಸಾವಿರಾರು ಜನರು ಕಾಯುತ್ತಾ ಕುಳಿತಿದ್ದಾರೆ. ಇಲ್ಲಿ ನನ್ನ ಬಸ್ಸನ್ನು ತಡೆದರೆ ಅಲ್ಲಿ ಕಾಯುತ್ತಿರುವವರ ಗತಿ ಏನು? ಆ ಕಾರಣಕ್ಕಾಗಿಯೇ ನಾನು ಅವರ ಮೇಲೆ ಅಸಮಾಧಾನಗೊಂಡೆ’

-ಕುಮಾರಸ್ವಾಮಿ, ಮುಖ್ಯಮಂತ್ರಿ

‘ವೆಟಿಪಿಎಸ್ ಕಲ್ಲಿದ್ದಲು ಕೊರತೆ ನೆಪದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ. ಇಲ್ಲಿನ 500ಕ್ಕೂ ಹೆಚ್ಚು ಕಾರ್ಮಿಕರು ಕೆಲಸವಿಲ್ಲದೆ ಬೀದಿಗೆ ಬಿದ್ದಿದ್ದಾರೆ. 13,250 ಕೋಟಿ ರೂ.ಹೂಡಿಕೆ ಮಾಡಿ ಕಾರ್ಖಾನೆ ಸ್ಥಾಪಿಸಿ ಉದ್ಯೋಗವಿಲ್ಲ ಎಂದರೆ ಹೇಗೆ? ಅಲ್ಲದೆ, ತುಂಗಭದ್ರಾ ನೀರು ನಿರ್ವಹಣಾ ಕಾರ್ಮಿಕರಿಗೆ 14 ತಿಂಗಳಿಂದ ವೇತನವಿಲ್ಲ. ಹೀಗಾಗಿ ಕಾರ್ಮಿಕರ ಸಮಸ್ಯೆ ಇತ್ಯರ್ಥಕ್ಕೆ ಸಿಎಂಗೆ ಮನವಿ ಮಾಡಿದ್ದೇವೆ. ಅವರು ಶೀಘ್ರವೇ ಸಮಸ್ಯೆ ಈಡೇರಿಸುವ ಭರವಸೆ ನೀಡಿದ್ದು, ಕಾರ್ಮಿಕರ 26 ದಿನಗಳಿಂದ ನಡೆಸುತ್ತಿದ್ದ ಸತ್ಯಾಗ್ರಹ ಹಿಂಪಡೆದಿದ್ದೇವೆ’

-ಆರ್.ಮಾನಸಯ್ಯ, ಕಾರ್ಮಿಕ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News