ಎರಡು ತಲೆಯ ಹಾವು ಮಾರಾಟಕ್ಕೆ ಯತ್ನ ಆರೋಪ: ಐವರ ಬಂಧನ

Update: 2019-06-26 12:39 GMT

ಚಿಕ್ಕಮಗಳೂರು, ಜೂ.26: ಅಕ್ರಮವಾಗಿ ಹಿಡಿದು ಮಾರಾಟ ಮಾಡುತ್ತಿದ್ದ ಎರಡು ತಲೆಯ ಹಾವನ್ನು ರಕ್ಷಣೆ ಮಾಡಿರುವ ಅರಣ್ಯ ಇಲಾಖೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡುತಲೆ ಹಾವನ್ನು ಹಿಡಿದು ಮಾರ್ಕೆಟ್ ರಸ್ತೆಯ ಮಟನ್ ಅಂಗಡಿ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಜೀತು ಶೆಟ್ಟಿ, ಟಿಪ್ಪುನಗರದ ಮುಹಮ್ಮದ್ ಗೌಸ್, ಜೀಶಾನ್, ಇಕ್ಬಾಲ್ ಅಹ್ಮದ್, ಶಾಂತಿ ನಗರದ ಸೈಯದ್ ಶಾಬಾಸ್ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಒಂದು 1,05,800 ರೂ. ನಗದನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಪೊಲೀಸ್ ಗುಪ್ತದಳದ ಖಚಿತ ಮಾಹಿತಿ ಮೇರೆಗೆ ವಲಯಾರಣ್ಯಾಧಿಕಾರಿ ಎಸ್.ಎಲ್.ಶಿಲ್ಪಾ ನೇತೃತ್ವದಲ್ಲಿ ಸಂಜೆ ಮಾರ್ಕೆಟ್ ರಸ್ತೆಯ ನಗರಸಭೆ ಮಳಿಗೆ ಬಳಿ ಮಂಗಳವಾರ ಸಂಜೆ ವೇಳೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾವನ್ನು ರಕ್ಷಣೆ ಮಾಡಿ, ಆರೋಪಿಗಳನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.

ರಕ್ಷಣೆ ಮಾಡಿದ ಎರಡು ತಲೆಯ ಹಾವು 1.20 ಉದ್ದ, ಮೂರು ಕೆಜಿ ತೂಕವಿದ್ದು, ಹಾವನ್ನು ಸದ್ಯ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಡಿಆರ್‍ಎಫ್‍ಓ ರವಿರಾಜ್, ಎಸ್.ಡಿ.ದೀಪಕ್, ಅರಣ್ಯ ರಕ್ಷಕರಾದ ಆದರ್ಶ್, ನಾರಾಯಣ್, ಶಿವರಾಜ್, ಆಸಿಫ್, ಪುರುಶೋತ್ತಮ್ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News