ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ ಸಾವಿರಾರು ರೂ. ವಂಚನೆ: ದೂರು ದಾಖಲು

Update: 2019-06-26 12:46 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಜೂ. 26: ಬ್ಯಾಂಕ್ ಮ್ಯಾನೇಜರ್ ಎಂದು ವ್ಯಕ್ತಿಯೋರ್ವರಿಗೆ ಕರೆ ಮಾಡಿದ ವಂಚಕ, ಎಟಿಎಂ ಕಾರ್ಡ್ ನವೀಕರಣ ಮಾಡಬೇಕಾಗಿದೆ ಎಂದು ಸುಳ್ಳು ಹೇಳಿ ಎಟಿಎಂ ಕಾರ್ಡ್ ನಂಬರ್ ಹಾಗೂ ಓಟಿಪಿ ಪಡೆದು ಸಾವಿರಾರು ರೂ. ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಭದ್ರಾವತಿ ಪಟ್ಟಣದ ನೆಹರೂ ನಗರದ ನಿವಾಸಿ ಪ್ರಭಾಕರ್.ಜೆ ವಂಚನೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರ ಬ್ಯಾಂಕ್ ಖಾತೆ ಮಾತ್ರವಲ್ಲದೆ ಅವರ ಪತ್ನಿ, ಮಗಳ ಬ್ಯಾಂಕ್ ಖಾತೆಯಿಂದಲೂ ವಂಚಕ ಆನ್‍ಲೈನ್ ಮೂಲಕ ಹಣ ಎಗರಿಸಿದ್ದಾನೆ. ಒಟ್ಟಾರೆ 52,494 ರೂ. ವಂಚಿಸಲಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. 

ವಂಚನೆ: ಪ್ರಭಾಕರ್ ರವರ ಮೊಬೈಲ್‍ಗೆ ಅನಾಮಧೇಯ ನಂಬರ್ ನಿಂದ ಕರೆಯೊಂದು ಬಂದಿದೆ. ತಾವು ಬ್ಯಾಂಕ್ ಮ್ಯಾನೇಜರ್ ಎಂದು ವಂಚಕ ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಬ್ಯಾಂಕ್ ಎಟಿಎಂ ಕಾರ್ಡ್ ನವೀಕರಣ ಮಾಡಬೇಕಾಗಿದೆ ಎಂದು ತಿಳಿಸಿದ್ದಾನೆ. ತದನಂತರ ಕುಟುಂಬದ ಇತರೆ ಸದಸ್ಯರ ಮಾಹಿತಿ ಪಡೆದು ಅವರ ಎಟಿಎಂ ಕಾರ್ಡ್‍ಗಳನ್ನು ನವೀಕರಣ ಮಾಡಿಕೊಡುವುದಾಗಿ ಹೇಳಿದ್ದಾನೆ. 

ಈ ಮಾತನ್ನು ನಂಬಿದ ಪ್ರಭಾಕರ್ ರವರು, ವಂಚಕನ ಸೂಚನೆಯಂತೆ ಎಟಿಎಂ ಕಾರ್ಡ್‍ಗಳ ನಂಬರ್ ಹಾಗೂ ಮೊಬೈಲ್‍ಗೆ ಬಂದ ಓಟಿಪಿ ಸಂಖ್ಯೆಯ ವಿವರಗಳನ್ನು ಕೊಟ್ಟಿದ್ದಾರೆ. ಇದಾದ ನಂತರ ಮೂರು ಜನರ ಬ್ಯಾಂಕ್ ಖಾತೆಗಳಿಂದ ವಂಚಕ ಆನ್‍ಲೈನ್ ಮೂಲಕ ಹಣ ಡ್ರಾ ಮಾಡಿಕೊಂಡಿದ್ದಾನೆ. ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿರುವುದು ಬೆಳಕಿಗೆ ಬಂದ ನಂತರ ವಂಚನೆಗೊಳಗಾಗಿರುವುದು ಪ್ರಭಾಕರ್ ರವರಿಗೆ ಅರಿವಾಗಿದೆ. ಬಳಿಕ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News