ಸಮಯ ಬಂದರೆ 'ಗ್ರಾಮ ವಾಸ್ತವ್ಯ' ನಡೆಯದಂತೆ ನೋಡಿಕೊಳ್ಳುತ್ತೇವೆ: ಬಿಎಸ್‌ವೈ ಎಚ್ಚರಿಕೆ

Update: 2019-06-26 13:19 GMT

ಬೆಂಗಳೂರು, ಜೂ. 26: ದೌರ್ಜನ್ಯದಿಂದ ಕೂಡಿದ ಗ್ರಾಮ ವಾಸ್ತವ್ಯವನ್ನು ರಾಜ್ಯದ ಜನತೆ ಸಹಿಸುವುದಿಲ್ಲ. ಜನರ ಮೇಲೆ ನಿಮ್ಮ ಮಾನಸಿಕ ದೌರ್ಜನ್ಯ ಮುಂದುವರಿದರೆ ಬಿಜೆಪಿ ರಾಜ್ಯವ್ಯಾಪಿ ಆಂದೋಲನ ರೂಪಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಸಮಯ ಬಂದರೆ ನಿಮ್ಮ ಗ್ರಾಮ ವಾಸ್ತವ್ಯ ನಡೆಯದಂತೆ ನೋಡಿಕೊಳ್ಳುತ್ತೇವೆ. ಜನವಿರೋಧಿ ಗ್ರಾಮ ವಾಸ್ತವ್ಯಕ್ಕೆ ಧಿಕ್ಕಾರ ಎಂದ ಯಡಿಯೂರಪ್ಪ, ಮೋದಿಗೆ ಮತ ಹಾಕಿದರು ಎಂಬ ಕಾರಣಕ್ಕೆ ಹೀಯಾಳಿಸಿ ಮಾತನಾಡುವುದು ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ಮಾಡಿದ ಅವಮಾನ ಎಂದು ಆಕ್ಷೇಪಿಸಿದ್ದಾರೆ.

ಹಳ್ಳಿಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜನರ ಭಾವನೆಗಳನ್ನು ಹತ್ತಿಕ್ಕಿ ನೀವು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಮತ್ತು ಜನವಿರೋಧಿ ಕ್ರಮ ಎಂದು ಟೀಕಿಸಿರುವ ಅವರು, ಕುಮಾರಸ್ವಾಮಿ ಬಿಜೆಪಿ ಗೆದ್ದ ಕಾರಣಕ್ಕೆ ಸಂಯಮ ಕಳೆದುಕೊಳ್ಳುತ್ತಿರುವುದು ಅವರ ಕೊಳಕು ಮನಸ್ಸನ್ನು ಎತ್ತಿ ತೋರಿಸುತ್ತದೆ ಎಂದು ಲೇವಡಿ ಮಾಡಿದ್ದಾರೆ.

ಕುಮಾರಸ್ವಾಮಿ ಈ ರೀತಿ ಸಂಯಮ ಕಳೆದುಕೊಳ್ಳುತ್ತಿರುವುದು ಇದೇ ಮೊದಲನೇ ಬಾರಿ ಏನೂ ಅಲ್ಲ. ಯಾವಾಗಲೂ ಅವರಿಗೆ ಜನರೆಂದರೆ ಅದರಲ್ಲೂ ಉತ್ತರ ಕರ್ನಾಟಕದ ಜನತೆ ಅಂದರೆ ಆಗುವುದಿಲ್ಲ. ಗ್ರಾಮ ವಾಸ್ತವ್ಯ ಬೂಟಾಟಿಕೆ ಎಂದು ಮತ್ತೆ ಬಿಂಬಿಸಿದ್ದಾರೆಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News