ಕಾನೂನು ಬಾಹಿರ ಮಾರಾಟ: 55 ಔಷಧಿ ಮಳಿಗೆಗಳ ಪರವಾನಿಗೆ ರದ್ಧು

Update: 2019-06-26 13:32 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.26: ರಾಜ್ಯದಲ್ಲಿ ಕಾನೂನು ಬಾಹಿರವಾಗಿ ಔಷಧ ಮಾರಾಟ ಮಾಡಿದ ಆರೋಪದಲ್ಲಿ 2015ರಿಂದ 2018ರವರೆಗೆ ನಿರ್ದಿಷ್ಟ ಅವಧಿಗೆ ಅಮಾನತು ಮಾಡಿದ್ದ ಔಷಧ ಮಳಿಗೆಗಳಲ್ಲಿ 55 ಮಳಿಗೆಗಳ ಪರವಾನಿಗೆ ರದ್ದು ಮಾಡಲಾಗಿದೆ.

ಇದುವರೆಗೂ ಸುಮಾರು 706 ಔಷಧ ಮಳಿಗೆಗಳ ಪರವಾನಿಗೆಯನ್ನು ನಿರ್ದಿಷ್ಟ ಅವಧಿಗೆ ಅಮಾನತುಗೊಳಿಸಲಾಗಿತ್ತು. ಕೊಡೀನ್ ಫಾಸ್ಪೆಟ್, ಆಲ್ಟ್ರಜೊಲಮ್ ಕಟಮೆನ್, ಡಯಜಪಾಮ್ ಪೆಂಟಜೊಸಿನ್ ಸೇರಿ ನಿಷೇಧಿತ ಔಷಧ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಔಷಧ ಮಳಿಗೆಗಳ ಪರವಾನಿಗೆಯನ್ನು ಔಷಧ ಮತ್ತು ಕಾಂತಿವರ್ಧಕ ಅಧಿನಿಯಮಗಳ ಅಡಿ ಔಷಧ ನಿಯಂತ್ರಣ ಇಲಾಖೆಯು ಕ್ರಮ ಕೈಗೊಂಡಿದೆ.

ನಿಷೇಧಿತ ಔಷಧ ವಿರುದ್ಧ ಬಿಗಿ ಕ್ರಮ: ರಾಜ್ಯದಲ್ಲಿ ನಿಷೇಧಿತ ಔಷಧ ಮಾರಾಟ ಜಾಲವನ್ನು ಬೇರು ಸಮೆತ ಕಿತ್ತೊಗೆಯಲು ಔಷಧ ನಿಯಂತ್ರಣ ಇಲಾಖೆ ಪಣ ತೊಟ್ಟಿದೆ. ಹತ್ತಾರು ತಂಡಗಳು ಔಷಧ ತಯಾರಿಕಾ ಕಂಪನಿಗಳ ಮೇಲೆ ದಾಳಿ ಮಾಡುತ್ತಿವೆ. ಕಾನೂನು ಬಾಹಿರವಾಗಿ ಔಷಧ ಮಾರಾಟ ಮಾಡುತ್ತಿರುವ ಮಳಿಗೆ ಪತ್ತೆ ಮಾಡಲು ಇಲಾಖೆ ಪ್ರತಿ ವರ್ಷ 2 ಬಾರಿ ಮೂರು ದಿನಗಳ ಕಾಲ ವಿಶೇಷ ಪರಿವೀಕ್ಷಣಾ ಆಂದೋಲನ ನಡೆಸುತ್ತಿದೆ. ಮಾನವನ ದೇಹಕ್ಕೆ ವಿಷಕಾರಿಯಾದ ಔಷಧ ತಯಾರಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ಇಲಾಖೆ ಎಚ್ಚರಿಸಿದೆ.

ಖರೀದಿಸುವ ಮುನ್ನ ಎಚ್ಚರ!: ಅವಧಿ ಮಿರಿದ ಔಷಧ ಬಳಕೆಯಿಂದ ರೋಗಿಗಳ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಹೀಗಾಗಿ ಔಷಧ ಖರೀದಿಸುವ ಮುನ್ನ ದಿನಾಂಕ ಪರಿಶೀಲನೆ ಅಗತ್ಯ. ವೈದ್ಯರ ಸಲಹೆ ಪಡೆಯದೆ ಅಂದಾಜಿನ ಮೇಲೆ ಔಷಧ ಸೇವಿಸಬಾರದು.

ಔಷಧ ಅಂಗಡಿಯಲ್ಲಿ ಔಷಧಗಳು ದುರುಪಯೊಗ ಆಗಬಾರದು ಎನ್ನುವ ನಿಟ್ಟಿನಲ್ಲಿ ನಿಯಮಾವಳಿ ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ. ನಕಲಿ ಔಷಧ ಉತ್ಪಾದನೆ ಮತ್ತು ಮಾರಾಟ ಜಾಲ ಹಾಗೂ ಔಷಧ ಅಂಗಡಿಗಳ ಬಗ್ಗೆಯೂ ಗಮನಹರಿಸಲಾಗಿದೆ. ಔಷಧ ನಿಯಂತ್ರಣ ಇಲಾಖೆ ಮೂಲಕ ದಾಖಲಿಸಲಾಗಿರುವ ಪ್ರಕರಣದಲ್ಲಿ ಶೇ.81.62 ಶಿಕ್ಷೆಯಾಗಿದೆ. ತಪ್ಪಿತಸ್ಥರ ಶಿಕ್ಷಿಸುವ ಕಾನೂನು ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪ್ರಭಾರ ಔಷಧ ನಿಯಂತ್ರಕ ಅಮರೇಶ ತುಂಬಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News