ಇವಿಎಂ ಬಳಕೆ ವಿರೋಧಿಸಿ ಪತ್ರ ಚಳವಳಿಗೆ ಮಹಿಳಾ ಕಾಂಗ್ರೆಸ್ ಚಾಲನೆ

Update: 2019-06-26 13:45 GMT

ಬೆಂಗಳೂರು, ಜೂ.26: ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಕೆ ಬೇಡ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಆಗ್ರಹಿಸಿದೆ.

ಬುಧವಾರ ನಗರದ ಕೇಂದ್ರ ಅಂಚೆ ಕಚೇರಿ ಮುಂದೆ ಪತ್ರ ಚಳವಳಿಗೆ ಚಾಲನೆ ನೀಡಿದ ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ.ಪುಷ್ಪ ಅಮರನಾಥ್, ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತಕ್ಕೆ ವಿದ್ಯುನ್ಮಾನ ಮತಯಂತ್ರ ಮಾರಕವಾಗಿ ಪರಿಣಮಿಸಿದ್ದು, ಇವಿಎಂಗೆ ಪರ್ಯಾಯವಾಗಿ ಈ ಹಿಂದಿನಂತೆ ಮತಪತ್ರ ಮೂಲಕ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದರು.

ರಾಷ್ಟ್ರದ ಬಹುತೇಕ ರಾಜಕೀಯ ಪಕ್ಷಗಳು ವಿದ್ಯುನ್ಮಾನ ಮತಯಂತ್ರ ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ ಭಾರತೀಯ ಜನತಾ ಪಕ್ಷ ಮಾತ್ರ ವಿದ್ಯುನ್ಮಾನ ಮತಯಂತ್ರ ಇರಬೇಕೆಂದು ಒತ್ತಾಯಿಸಿದೆ. ತಾಂತ್ರಿಕವಾಗಿ ಭಾರತಕ್ಕಿಂತಲೂ ಮುಂದುವರೆದಿರುವ ರಾಷ್ಟ್ರಗಳಾದ ಅಮೆರಿಕ, ಜರ್ಮನಿ ಮುಂತಾದ ರಾಷ್ಟ್ರಗಳಲ್ಲಿ ಇಂದಿಗೂ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಮೂಲಕವೇ ನಡೆಸುತ್ತಿವೆ. ಆದರೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ವಿದ್ಯುನ್ಮಾನ ಮತಯಂತ್ರ ನಮಗೇಕೆ ಬೇಕು ಎಂದು ಅವರು ಪ್ರಶ್ನಿಸಿದರು.

ರಾಜ್ಯದ ಎಲ್ಲಾ ಮಹಿಳಾ ಘಟಕ ಹಾಗೂ ಜಿಲ್ಲಾ ಮಹಿಳಾ ಘಟಕಗಳು ಈ ಚಳವಳಿಯಲ್ಲಿ ಭಾಗವಹಿಸಿ ರಾಜ್ಯದ ಮೂಲೆಮೂಲೆಗಳಿಂದ ವಿದ್ಯುನ್ಮಾನ ಮತಯಂತ್ರ ಬಳಕೆ ಬೇಡವೆಂದು ಆಗ್ರಹಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಿದ್ದೇವೆ. ಅಲ್ಲದೆ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತರು, ಪದಾಧಿಕಾರಿಗಳು, ಅಂಚೆ ಕಾರ್ಡ್‌ನಲ್ಲಿ ಕೈಬರಹದ ಮೂಲಕ ರಾಷ್ಟ್ರಪತಿಗಳಲ್ಲಿ ತಮ್ಮ ಹಕ್ಕೊತ್ತಾಯ ಮಂಡಿಸಲಿದ್ದಾರೆ ಎಂದು ತಿಳಿಸಿದರು.

ರಾಜ್ಯ ಮಹಿಳಾ ಕಾಂಗ್ರೆಸ್ ವಿದ್ಯುನ್ಮಾನ ಮತಯಂತ್ರ ಬೇಡ ಎನ್ನುವ ಮೊದಲ ಹಂತದ ಪತ್ರ ಚಳವಳಿಯನ್ನು ಒಂದು ಲಕ್ಷ ಪತ್ರವನ್ನು ರಾಷ್ಟ್ರಪತಿಗಳಿಗೆ ಬರೆಯುವ ಮೂಲಕ ಆರಂಭಿಸಿದೆ.

-ಡಾ.ಬಿ.ಪುಷ್ಪಅಮರನಾಥ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News