ಆಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣ: ದಿಲ್ಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

Update: 2019-06-26 13:55 GMT

ಹೊಸದಿಲ್ಲಿ, ಜೂ.26: ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಒಪ್ಪಂದ ಹಗರಣದಲ್ಲಿ ಮಧ್ಯವರ್ತಿ ಎನ್ನಲಾಗಿರುವ ಉದ್ಯಮಿ ರಾಜೀವ್ ಸಕ್ಸೇನಾಗೆ ವೈದ್ಯಕೀಯ ಕಾರಣಕ್ಕೆ ವಿದೇಶ ಪ್ರಯಾಣಕ್ಕೆ ಅವಕಾಶ ನೀಡಿದ್ದ ದಿಲ್ಲಿ ಹೈಕೋರ್ಟ್ ಆದೇಶಕ್ಕೆ ಬುಧವಾರ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.

ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದಲ್ಲಿ ಮಧ್ಯವರ್ತಿ ಎನ್ನಲಾಗಿದ್ದ ಸಕ್ಸೇನಾ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಪರಿವರ್ತಿತರಾಗಿದ್ದರು. ಜೂನ್ 25ರಿಂದ ಜುಲೈ 24ರವರೆಗೆ ಯುಎಇ, ಬ್ರಿಟನ್ ಹಾಗೂ ಯುರೋಪ್ ಪ್ರವಾಸಕ್ಕೆ ತೆರಳಲು ಸಕ್ಸೇನಾಗೆ ದಿಲ್ಲಿ ಹೈಕೋರ್ಟ್ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸುಪ್ರೀಂನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ. ಸಂಜೀವ್ ಖನ್ನಾ ಮತ್ತು ಬಿಆರ್ ಗವಾಯ್ ಅವರಿದ್ದ ರಜಾಕಾಲದ ಪೀಠವು ಆದೇಶಕ್ಕೆ ತಡೆ ನೀಡಿತಲ್ಲದೆ ಸಕ್ಸೇನಾಗೆ ನೋಟಿಸ್ ಜಾರಿಗೊಳಿಸಿದೆ. ಈ ಪ್ರಕರಣದಲ್ಲಿ ಅಡಕವಾಗಿರುವ ಇತರ ಕೆಲವು ಅಪರಾಧದ ಕುರಿತ ಕೆಲವು ಹೊಸ ವಿಷಯಗಳು ಗೋಚರಕ್ಕೆ ಬಂದಿದೆ .

ಈ ಹಿನ್ನೆಲೆಯಲ್ಲಿ ಸಕ್ಸೇನಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಜಾರಿ ನಿರ್ದೇಶನಾಲಯದ ಪ್ರತಿನಿಧಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು. ಸಕ್ಸೇನಾರಿಗೆ ಭಾರತದಲ್ಲೇ ಚಿಕಿತ್ಸೆ ಲಭ್ಯವಿದೆ. ವಿದೇಶಕ್ಕೆ ತೆರಳಿದರೆ ಅವರು ಭಾರತಕ್ಕೆ ವಾಪಸಾಗುತ್ತಾರೆಯೇ ಅಥವಾ ಇಲ್ಲವೇ ಎಂಬ ವಿಷಯ ಇಲ್ಲಿ ಅಪ್ರಸ್ತುತವಾಗಿದೆ. ಆದರೆ ವಿಚಾರಣೆಯ ಸಂದರ್ಭ ಹೊಸ ಮಾಹಿತಿ ಹೊರಬಿದ್ದಿರುವ ಕಾರಣ ಅವರ ಉಪಸ್ಥಿತಿ ಅಗತ್ಯವಾಗಿದೆ ಎಂದು ಮೆಹ್ತಾ ವಾದಿಸಿದರು.

ವಿಚಾರಣೆಯ ಸಂದರ್ಭ ಆರೋಪಿಯ ವಿರುದ್ಧ ಹೊಸ ವಿಷಯಗಳು ಹೊರಬಿದ್ದರೆ ಆಗ ಅಗತ್ಯಬಿದ್ದರೆ ಆರೋಪಿ ತನಿಖೆಯ ಸಂದರ್ಭ ಹಾಜರಿರಬೇಕಾಗುತ್ತದೆ ಎಂದು ನ್ಯಾ. ಖನ್ನಾ ಅಭಿಪ್ರಾಯಪಟ್ಟರು. ಅಲ್ಲದೆ ಸಕ್ಸೇನಾರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಪರೀಕ್ಷಿಸಿ ಮೂರು ವಾರದೊಳಗೆ ಅರ್ಜಿ ಸಲ್ಲಿಸುವಂತೆ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಗೆ ಸೂಚಿಸಿದರು. ಜೊತೆಗೆ, ಒಂದು ವೇಳೆ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲೇ ಬೇಕಿದ್ದರೆ ಸಕ್ಸೇನಾರ ಸಹೋದರಿ ಮತ್ತು ಅತ್ತಿಗೆ ಜಾಮೀನು ನಿಂತು ತಲಾ 5 ಕೋಟಿ ರೂ. ಬಾಂಡ್ ಒದಗಿಸಲು ಸಿದ್ಧರಿದ್ದಾರೆಯೇ ಎಂಬುದನ್ನು ಖಾತರಿಪಡಿಸುವಂತೆ ಸಕ್ಸೇನಾರ ವಕೀಲರಿಗೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News