ತುಮಕೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರಿಂದ ಡಿಸಿ ಕಚೇರಿಗೆ ಮುತ್ತಿಗೆ

Update: 2019-06-26 14:24 GMT

ತುಮಕೂರು, ಜೂ.26: ಸತತ ಬರದಿಂದ ತತ್ತರಿಸಿರುವ ಜಿಲ್ಲೆಯ ಜಾನುವಾರುಗಳಿಗೆ ಮೇವು ಮತ್ತು ನೀರು ಒದಗಿಸುವ ನಿಟ್ಟಿನಲ್ಲಿ ಕೂಡಲೇ ಜಿಲ್ಲಾಡಳಿತ ಗೋಶಾಲೆಗಳನ್ನು ಆರಂಭಿಸಬೇಕು. ಪ್ರಧಾನಮಂತ್ರಿಗಳ ಫಸಲ್ ಭೀಮಾ ಯೋಜನೆಯಡಿ ನೊಂದಾಯಿತ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ನಗರದ ಟೌನ್‍ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ಸಾವಿರಾರು ರೈತರು, ಅಶೋಕ ರಸ್ತೆಯ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿ ತೆರಳಿ ಮುತ್ತಿಗೆ ಹಾಕಿದರು. ಈ ವೇಳೆ ಮಾತನಾಡಿದ ಹಸಿರು ಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಬರ ತಾಂಡವವಾಡುತಿದ್ದು, ಸುಮಾರು 82 ಸಾವಿರ ಹೆಕ್ಟೇರ್ ಜಮೀನಿಗೆ ನೀರುಣಿಸುತ್ತಿದ್ದ 2010 ಕೆರೆಗಳು ಬತ್ತಿಹೋಗಿವೆ. 3 ಲಕ್ಷಕ್ಕೂ ಅಧಿಕ ಕೊಳವೆ ಬಾವಿಗಳಲ್ಲಿ ಶೇ.80 ರಷ್ಟು ವಿಫಲವಾಗಿವೆ. ಮೂವತ್ತು ವರ್ಷಗಳ ಹಿಂದೆ ನಿರ್ಮಾಣವಾದ ನಾಲೆ ಹೂಳು ತುಂಬಿ ಸರಾಗವಾಗಿ ನೀರು ಹರಿಯದಂತಹ ಸ್ಥಿತಿ ಇದೆ. ಈ ಎಲ್ಲಾ ಸಮಸ್ಯೆಗಳನ್ನು ರೈತರು ಅನುಭವಿಸುತ್ತಿದ್ದರೂ, ಜಿಲ್ಲಾಡಳಿತ ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ಕೂಡಲೇ ನಾಲೆಯಲ್ಲಿರುವ ಹೂಳು ತೆಗೆದು, ಜಿಲ್ಲೆಯ ಪಾಲಿನ ನೀರು ಪಡೆಯಲು ಮುಂದಾಗುವಂತೆ ಒತ್ತಾಯಿಸಿದರು.

ಜಲಸಂಪನ್ಮೂಲ  ಸಚಿವರಾದ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರರು ಸೇರಿ, ತುಮಕೂರು ಬ್ರಾಂಚ್ ಕೆನಾಲ್ ನ ಸಂಕಾಪುರದಿಂದ ಪ್ರತ್ಯೇಕ ಎಕ್ಸ್‍ಪ್ರೆಸ್ ಕೆನಾಲ್ ಮೂಲಕ ಕುಣಿಗಲ್ ನಗರ ಹಾಗೂ ಮಾಗಡಿ, ರಾಮನಗರಕ್ಕೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ 610 ಕೋಟಿ ರೂ. ಯೋಜನೆಗೆ ಸಚಿವ ಸಂಪುಟದ ಒಪ್ಪಿಗೆ ಪಡೆದಿದ್ದಾರೆ. ಈ ಯೋಜನೆಯಿಂದ ಗುಬ್ಬಿ, ತುಮಕೂರು ನಗರ ಗ್ರಾಮಾಂತರ, ಕೊರಟಗೆರೆ, ಮಧುಗಿರಿ, ಶಿರಾ ನಗರಗಳಿಗೆ ಕುಡಿಯುವ ನೀರಿನ ತೊಂದರೆಯಾಗಲಿದೆ. ಈಗಾಗಲೇ 1200 ಅಡಿ ಕೊರೆದರೂ ಅಂತರ್ಜಲ ಮತ್ತಷ್ಟು ಆಳ ತಲುಪಲಿದೆ. ಆದ್ದರಿಂದ ಸರಕಾರ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಚಿರತೆ ಚಿಕ್ಕಣ್ಣ, ರವೀಶ್, ಕೆ.ಎನ್.ವೆಂಕಟೇಗೌಡ, ಚಿಕ್ಕಬೋರೇಗೌಡ, ಮೂಡ್ಲಗಿರಿಯಪ್ಪ, ಬಸವರಾಜು ಸೇರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News