ಕರೇಗುಡ್ಡ ಗ್ರಾಮದಲ್ಲಿ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Update: 2019-06-26 14:59 GMT

ರಾಯಚೂರು, ಜೂ. 26: ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಯ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದು, ಜಿಲ್ಲೆಗೆ ನದಿ ಮೂಲದಿಂದ ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ನಿನ್ನೆ ರಾತ್ರಿ ಬೆಂಗಳೂರಿನಿಂದ ರೈಲಿನ ಮೂಲಕ ರಾಯಚೂರಿಗೆ ತೆರಳಿದ ಸಿಎಂ ಕುಮಾರಸ್ವಾಮಿಯವರನ್ನು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ, ಜಿಲ್ಲಾಧಿಕಾರಿ ಶರತ್ ಸೇರಿದಂತೆ ಐಜಿಪಿ, ಎಸ್ಪಿ, ಜಿಲ್ಲಾ ಪಂಚಾಯತ್ ಸಿಇಓ ಸೇರಿದಂತೆ ಅಧಿಕಾರಿಗಳು ಸ್ವಾಗತಿಸಿದರು. ಪ್ರವಾಸಿ ಮಂದಿರದಲ್ಲಿ ಜಿಲ್ಲೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.

ಬಳಿಕ ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಜನತಾ ದರ್ಶನ, ಗ್ರಾಮವಾಸ್ತವ್ಯ ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಈಶಾನ್ಯ ಸಾರಿಗೆ ಸಂಸ್ಥೆ ಬಸ್ ಮೂಲಕಕ ತೆರಳಿದರು. ಈ ವೇಳೆ ಮಾರ್ಗಮಧ್ಯೆ ರಸ್ತೆತಡೆ ನಡೆಸಿದ ಪ್ರತಿಭಟನಾನಿತರ ಕಾರ್ಮಿಕರ ಮನವೊಲಿಸಿ ಗ್ರಾಮಕ್ಕೆ ತೆರಳಿದರು.

ಕರೇಗುಡ್ಡ ಗ್ರಾಮದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ‘ಜಲಧಾರೆ’ ಯೋಜನೆಯ ಮೂಲಕ ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಪ್ರಸ್ತಾವನೆ ಸರಕಾರದ ಮುಂದಿದ್ದು, ಅದಕ್ಕೆ ಶೀಘ್ರ ಅನುಮೋದನೆ ನೀಡುವ ಮೂಲಕ ಇಡೀ ಜಿಲ್ಲೆಗೆ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಬರಗಾಲ ಹಾಗೂ ಅದರ ನಿರ್ವಹಣೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆ ಚರ್ಚಿಸಿದ ಸಿಎಂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಿ, ಎಲ್ಲಿಯೂ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಿ ಎಂದು ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಾನ್ವಿ ಕ್ಷೇತ್ರದಲ್ಲಿ ಲೋಕೋಪಯೋಗಿ, ಸಣ್ಣ ನೀರಾವರಿ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್, ಪ್ರವಾಸೋದ್ಯಮ, ಅಲ್ಪಸಂಖ್ಯಾತ ಕಲ್ಯಾಣ ಸೇರಿದಂತೆ 814 ಕೋಟಿ ರೂ.ವೆಚ್ಚದ ಒಟ್ಟು 38 ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದೇ ವೇಳೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ರಾಯಚೂರಿನ ನಿವಾಸಿ, ನಂದಿನಿ ಪಾಟೀಲ್ ಎಂಬ ಮಹಿಳೆಯ ಚಿಕಿತ್ಸೆಗೆ ಸಿಎಂ ಪರಿಹಾರ ನಿಧಿಯಿಂದ 2 ಲಕ್ಷ ರೂ. ಚೆಕ್ ಅನ್ನು ಅವರ ಕುಟುಂಬದ ಸದಸ್ಯರಿಗೆ ಕುಮಾರಸ್ವಾಮಿ ವಿತರಿಸಿದರು. ಅಲ್ಲದೆ, 22 ವಿಕಲಚೇತನರ ವಾಹನಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ, ಸಚಿವ ಸಾ.ರಾ.ಮಹೇಶ್, ಶಾಸಕರಾದ ರಾಜಾವೆಂಕಟಪ್ಪ ನಾಯಕ್, ಬಸವನಗೌಡ ದದ್ದಲ್, ಬಿ.ಎಸ್.ಹೂಲಿಗೇರಿ, ಪ್ರತಾಪಗೌಡ, ಪರಿಷತ್ ಸದಸ್ಯ ಎನ್.ಎಸ್. ಭೋಸರಾಜು, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಉಪಸ್ಥಿತರಿದ್ದರು.

‘ಮತ ಮೋದಿಗೆ ಹಾಕ್ತೀರಿ ಸಮಸ್ಯೆಗಳನ್ನು ಪರಿಹರಿಸಲಿಕ್ಕೆ ನನ್ನ ಬಳಿಗೆ ಬರ್ತೀರಿ’ ಅಂತ ನಾನು ಹೇಳಿದ್ದನ್ನೇ ಬಿಜೆಪಿಯವರು ತಮ್ಮ ವೈಯಕ್ತಿಕ ರಾಜಕೀಯಕ್ಕೆ ಬಳಕೆ ಮಾಡುತ್ತಿದ್ದು, ಅದನ್ನು ಘೋರ ಅಪರಾಧವೆಂಬಂತೆ ಬಿಂಬಿಸುತ್ತಿದ್ದಾರೆ. ಇನ್ನು ಮುಂದೆ ಅದನ್ನು ಮಾತನಾಡದೆ ನನ್ನ ಕೆಲಸ ನಾನು ಮಾಡುತ್ತೇನೆ’

-ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News