ರಾಯಚೂರು ಸಮಗ್ರ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ: ಸಿಎಂ ಕುಮಾರಸ್ವಾಮಿ

Update: 2019-06-26 15:02 GMT

ರಾಯಚೂರು, ಜೂ. 26: ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಂಬಂಧಿಸಿದಂತೆ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು. ಅಲ್ಲದೆ, 3ಸಾವಿರ ಕೋಟಿ ರೂ.ವೆಚ್ಚದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಮಾತನಾಡಿದ ಅವರು, ರಾಯಚೂರು ವಿವಿ ಕುರಿತು ಸುಗ್ರಿವಾಜ್ಞೆ ಮಾಡಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ವಿವರಣೆ ಕೋರಿದ್ದು, ಆ ಕುರಿತು ಮನವೊಲಿಸಲಾಗುವುದು ಎಂದರು. ಐಐಐಟಿಗೆ ಭೂಮಿ ನೀಡುವುದು ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.

ತುಂಗಭದ್ರಾ ಜಲಾಶಯದ 31 ಟಿಎಂಸಿ ಹೂಳು ತುಂಬಿಕೊಂಡಿದ್ದು, ಅದು ತೆಗೆಯುವುದು ಅಸಾಧ್ಯ ಎಂಬ ವರದಿ ಹಿನ್ನೆಲೆಯಲ್ಲಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಪಿಎಆರ್ ರೂಪಿಸುವುದಕ್ಕೆ ಸೂಚನೆ ನೀಡಲಾಗಿದೆ.

ಅಭಿವೃದ್ಧಿ ವಿಷಯದಲ್ಲಿ ಮೈತ್ರಿ ಸರಕಾರ ಹಿಂಜರಿಯುವ ಪ್ರಶ್ನೆಯೇ ಇಲ್ಲ. ಅಭಿವೃದ್ಧಿಗೆ ದುಡ್ಡಿನ ಕೊರತೆ ಇಲ್ಲ. ಸಾಲಮನ್ನಾಕ್ಕಾಗಿ ಹಣವನ್ನು ವಿವಿಧ ಇಲಾಖೆಗಳಿಗೆ ಹಣ ಕಡಿತಮಾಡಲಾಗಿದೆ ಎಂಬುದು ಸುಳ್ಳು. ಸಣ್ಣ ಮತ್ತು ಬೃಹತ್ ನೀರಾವರಿಗೆ ಈ ವರ್ಷ 19 ಸಾವಿರ ಕೋಟಿ ರೂ. ಒದಗಿಸಲಾಗಿದೆ ಎಂದರು. ರಾಜ್ಯದ 6.5 ಕೋಟಿ ಜನರು ನನ್ನ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು. ಬಿಜೆಪಿಯವರ ಹೆಸರು ಹೇಳಿಕೊಂಡು ಕೆಲಸ ಮಾಡುವ ಅಗತ್ಯ ನನಗಿಲ್ಲ. ಈ ಮುಂಚೆ ಅವರದೇ ಸರಕಾರವಿದ್ದಾಗ ಏನು ಮಾಡಿದ್ದರು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ದೇವದುರ್ಗ ತಾಲೂಕಿಗೆ ನೀರಾವರಿಯನ್ನು ದೇವೇಗೌಡರು ಒದಗಿಸಿದ್ದ ಸಂದರ್ಭದಲ್ಲಿ ಆರೋಪ ಮಾಡುವ ವ್ಯಕ್ತಿ ಹುಟ್ಟಿದ್ದನೋ ಗೊತ್ತಿಲ್ಲ ಎಂದರು. ರಾಯಚೂರು ಜಿಲ್ಲೆಗೆ 182 ಕೋಟಿ ರೂ.ರಾಷ್ಟ್ರೀಕೃತ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗಿದೆ ಎಂದರು.

ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬಂದು ಜನರಿಗೆ ಕಾಣುವುದಕ್ಕೆ ಇನ್ನೂ 4 ತಿಂಗಳು ಬೇಕು ಎಂದ ಅವರು, ಆರೋಪ ಮಾಡುವವರು ಸುಖಾಸುಮ್ಮನೆ ಆರೋಪ ಮಾಡಬಾರದು. ಗ್ರಾಮ ವಾಸ್ತವ್ಯಕ್ಕೆ ಸಂಬಂಧಿಸಿದಂತೆ ವಿನಾಕಾರಣ ಟೀಕೆ, ಆರೋಪಗಳು ಮಾಡುತ್ತಿದ್ದು, ಅವರಿಗೆ ವಿಧಾನಸಭೆಯಲ್ಲಿ ಸುದೀರ್ಘವಾಗಿ ಉತ್ತರಿಸುವೆ ಎಂದರು.

ವಿವಿಧ ಇಲಾಖೆಗಳ 61ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಪಟ್ಟಿ ಪಡೆದುಕೊಳ್ಳಲಾಗಿದ್ದು, ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದ ಅವರು, ಶಾಶ್ವತವಾದ ಕುಡಿಯುವ ನೀರಿನ ಯೋಜನೆಗಳು ಇಡೀ ರಾಜ್ಯಾದ್ಯಂತ ಆಗಬೇಕು ಎಂಬುದು ನಮ್ಮ ಬಯಕೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮೈತ್ರಿ ಸರಕಾರದ್ದೆ ಹೊರತು ಯಾವುದೇ ಪಕ್ಷಕ್ಕೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News