'ಗ್ರಾಮ ವಾಸ್ತವ್ಯ' ಸಹಿಸದೇ ಯಾವುದೋ ಶಕ್ತಿ ಅಡಚಣೆ ಉಂಟು ಮಾಡುತ್ತಿದೆ: ಎಚ್.ಡಿ.ದೇವೇಗೌಡ

Update: 2019-06-26 15:08 GMT

ಬೆಂಗಳೂರು, ಜೂ.26: ಮುಖ್ಯಮಂತ್ರಿಯ ಆರೋಗ್ಯವನ್ನು ಸರಿಪಡಿಸಲು, ಬಿಜೆಪಿ ಶಾಸಕ ಸಿ.ಟಿ.ರವಿ ಅವರೇನು ಸೂಪರ್ ಸ್ಪೆಷ್ಟಾಲಿಟಿ ಆಸ್ಪತ್ರೆಯ ವೈದ್ಯರೇ? ಯಾಕೆ ಈ ರೀತಿ ಎಲ್ಲರೂ ಮಾತನಾಡುತ್ತಾರೋ ಗೊತ್ತಾಗುತ್ತಿಲ್ಲ ಎಂದು ದೇವೇಗೌಡ ಹೇಳಿದರು.

ಮುಖ್ಯಮಂತ್ರಿ ಹತಾಶರಾಗಿ ಈ ರೀತಿ ವರ್ತಿಸುತ್ತಿದ್ದು, ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಿ.ಟಿ.ರವಿ ನೀಡಿದ ಹೇಳಿಕೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಯ ಗ್ರಾಮ ವಾಸ್ತವ್ಯವನ್ನು ಸಹಿಸಲು ಸಾಧ್ಯವಾಗದೇ ಯಾವುದೋ ಒಂದು ಶಕ್ತಿ ಅಡಚಣೆ ಉಂಟು ಮಾಡುತ್ತಿದೆ ಎಂದು ದೂರಿದರು. ಮುಖ್ಯಮಂತ್ರಿ ರಾಯಚೂರು ಜಿಲ್ಲೆಯ ಕರೇಗುಡ್ಡ ಗ್ರಾಮಕ್ಕೆ ತಲುಪುವ ಮುನ್ನವೇ ಅವರನ್ನು ತಡೆದು ನಮ್ಮ ಕೆಲಸ ಈಗಲೇ ಮಾಡಿಕೊಡಿ ಎಂದು ಒತ್ತಾಯಿಸುವುದು ಎಷ್ಟರ ಮಟ್ಟಿಗೆ ಸರಿ? ನನಗೆ ಯಾಕೆ ಹೀಗೆ ಮಾಡುತ್ತೀರಾ? ಎಂದು ಮುಖ್ಯಮಂತ್ರಿ ಕೇಳಿದ್ದಾರೆ ಎಂದು ದೇವೇಗೌಡ ಹೇಳಿದರು.

ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿ ಪೊಲೀಸರಿಗೂ ಸಾಕಾಗಿತ್ತು. ಅವರಿಗೂ ಒಂದು ಹಂತಕ್ಕೆ ತಾಳ್ಮೆ ಇರುತ್ತದೆ. ಈ ಪ್ರತಿಭಟನೆಗಳಿಂದ ಮುಖ್ಯಮಂತ್ರಿ ಒದ್ದಾಡುತ್ತಿದ್ದಾರೆ. ಇದರಿಂದಾಗಿ, ಲಾಠಿಚಾರ್ಜ್ ಮಾಡಿಸಬೇಕಾ ಎಂದು ಅವರು ಪೇಚಾಡುವಂತಾಗಿದೆ ಎಂದು ಅವರು ಹೇಳಿದರು.

ಉದ್ದೇಶಪೂರ್ವಕವಾಗಿ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಇದರ ಹಿಂದೆ ಯಾರ ಷಡ್ಯಂತ್ರವಿದೆ ಅನ್ನೋದು ನನಗೆ ಗೊತ್ತು. ಮುಖ್ಯಮಂತ್ರಿಯ ಮುಖ ನೋಡಲು ಆಗುತ್ತಿಲ್ಲ. ಜನರ ಸಮಸ್ಯೆ ಪರಿಹಾರ ಮಾಡುವುದಕ್ಕೆ ಅವರು ಹೋಗುತ್ತಿದ್ದಾರೆ. ಆದರೆ, ಮಾರ್ಗಮಧ್ಯೆ ಅವರನ್ನು ತಡೆದು ಪ್ರತಿಭಟನೆ ಮಾಡಿದರೆ, ಅವರು ಏನು ಮಾಡಬೇಕು ಎಂದು ದೇವೇಗೌಡ ಪ್ರಶ್ನಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷರ ನೇಮಕದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇನ್ನೆರಡು ಮೂರು ದಿನಗಳಲ್ಲಿ ಜೆಡಿಎಸ್ ಪಕ್ಷಕ್ಕೆ ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗುವುದು. ಈ ಬಾರಿಯ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಆರು ಮಂದಿ ಪರಿಶಿಷ್ಟರು ಆಯ್ಕೆಯಾಗಿ ಬಂದಿದ್ದಾರೆ. ಅವರಿಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ ಎಂಬ ಅಸಮಾಧಾನ ಅವರಲ್ಲಿರುವುದು ನನಗೂ ಗೊತ್ತಿದೆ ಎಂದು ಅವರು ಹೇಳಿದರು.

ಪರಿಶಿಷ್ಟರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂಬ ಆಲೋಚನೆಯೂ ಇದೆ. ಮಾಜಿ ಶಾಸಕ ಮಧು ಬಂಗಾರಪ್ಪಗೂ ರಾಜ್ಯಾಧ್ಯಕ್ಷ ಸ್ಥಾನವನ್ನು ನಿರ್ವಹಿಸುವ ಅರ್ಹತೆಯಿದೆ. ಎಲ್ಲ ಮುಖಂಡರನ್ನು ಕರೆದು ಚರ್ಚೆ ಮಾಡಿ ಸೂಕ್ತವಾದ ತೀರ್ಮಾನ ಮಾಡುತ್ತೇನೆ ಎಂದು ದೇವೇಗೌಡ ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಪಪ್ರಚಾರದಿಂದಾಗಿ ಜೆಡಿಎಸ್ ಕೇವಲ 37 ಸ್ಥಾನಗಳಲ್ಲಿ ಗೆಲ್ಲುವಂತಾಯಿತು. ಆದರೂ, ಸಮ್ಮಿಶ್ರ ಸರಕಾರದಲ್ಲಿ ಈ ಹಿಂದಿನ ಸಿದ್ದರಾಮಯ್ಯ ಸರಕಾರದ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ, ರೈತರ ಸಾಲ ಮನ್ನಾ ಮಾಡುವ ನಿರ್ಧಾರವನ್ನು ಕುಮಾರಸ್ವಾಮಿ ಕೈಗೊಂಡಿದ್ದಾರೆ ಎಂದು ಅವರು ಹೇಳಿದರು.

ಜುಲೈ 30ರೊಳಗೆ ಸಾಲ ಮನ್ನಾ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. 10-20 ಲಕ್ಷ ರೂ.ಸಾಲ ಮಾಡಿದರೆ ಅದನ್ನು ಮುಖ್ಯಮಂತ್ರಿ ತೀರಿಸಲು ಆಗುತ್ತದೆಯೇ? ರೈತರಿಗೆ ವರ್ಷಕ್ಕೆ 6 ಸಾವಿರ ರೂ. ಕೊಟ್ಟು ಇಡೀ ದೇಶದಲ್ಲಿ ದೊಡ್ಡ ಪ್ರಚಾರ ಮಾಡುತ್ತಾರೆ. ಯಾವಾಗಲೂ ಜನರಿಗೆ ಮೋಸ ಮಾಡಲು ಆಗುವುದಿಲ್ಲ ಎಂದು ದೇವೇಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News