ದರ್ಗಾದ ಧ್ವಜ ವಾಟ್ಸ್‌ಆ್ಯಪ್ ಸ್ಟೇಟಸ್‌ ಹಾಕಿದ್ದಕ್ಕೆ ಪುತ್ರನ ಕೊಲೆ: ತಾಯಿಯ ಆರೋಪ

Update: 2019-06-26 15:23 GMT

ಸುಳ್ಳು ಸುದ್ದಿ ಹರಡಿ ಪ್ರಕರಣ ಮುಚ್ಚಿ ಹಾಕುವ ಹುನ್ನಾರ: ಆರೋಪ

ದಾವಣಗೆರೆ, ಜೂ.26: ಹೊನ್ನಾಳಿಯ ದಯಾನತ್ ಖಾನ್ ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಖಾನ್ ಅಜ್ಮೀರ್ ದರ್ಗಾದ ಧ್ವಜವನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಹಾಕಿಕೊಂಡಿದ್ದಕ್ಕೆ ಆತನ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂದು ಕೊಲೆಗೀಡಾದ ದಯಾನತ್ ಖಾನ್‌ನ ತಾಯಿ ಅಖಿಲಾ ಬಾನು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮಗನನ್ನು ಕೊಲೆಗೈದಿರುವ ಎಲ್ಲಾ ಆರೋಪಿಗಳನ್ನು ಬಂಧಿಸಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು. ಅಜ್ಮೀರ್ ದರ್ಗಾದ ಧ್ವಜವನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಹಾಕಿಕೊಂಡಿದ್ದನ್ನೇ ನೆಪ ಮಾಡಿಕೊಂಡು ಕಳೆದ ಜೂ.9ರಂದು ನನ್ನ ಮಗ ದಯಾನತ್ ಖಾನ್ ಮೇಲೆ ಆತನ ಸ್ನೇಹಿತರೇ ಹಲ್ಲೆ ನಡೆಸಿದ್ದರು. ನಂತರ ಜೂ.14ರಂದು ರಾತ್ರಿ 8 ಗಂಟೆ ಸುಮಾರಿಗೆ ಗ್ಯಾರೇಜ್‌ನಲ್ಲಿ ಕೆಲಸ ಮುಗಿಸಿಕೊಂಡು ಬರುತ್ತಿದ್ದವನನ್ನು ಅಪಹರಿಸಿ ಕರೆದೊಯ್ದು ಕೊಲೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಹಿತ್ ಮತ್ತು ಹೇಮಂತ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಐದರಿಂದ ಆರು ಮಂದಿ ಭಾಗಿಯಾಗಿದ್ದು, ಅವರ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಪೊಲೀಸ್ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸುಳ್ಳು ವದಂತಿ ಹಬ್ಬಿಸುವ ಮೂಲಕ ನನ್ನ ಮಗನ ಸಾವಿನ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಕುಟುಂಬಕ್ಕೆ ಆಧಾರವಾಗಿದ್ದ ನನ್ನ ಮಗನನ್ನು ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಜೀವ ಬೆದರಿಕೆ ಎದುರಿಸುತ್ತಿರುವ ನಮ್ಮ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಮುಂದಿನ ದಿನಗಳಲ್ಲಿ ಯಾರಿಗೂ ಈ ರೀತಿ ಆಗದಂತೆ ಪ್ರಕರಣದ ನಿಷ್ಪಕ್ಷವಾಗಿ ತನಿಖೆ ನಡೆಸಿ, ನೊಂದವರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಹೈಬ್ ಖಾನ್, ವಕೀಲ ತನ್ವೀರ್ ಅಹ್ಮದ್, ಅಶ್ಫಾಕ್, ಸನಾವುಲ್ಲಾ ಇತರರು ಇದ್ದರು.

ಪ್ರಕರಣವೇನು?: ಜೂ.14ರಂದು ರಾತ್ರಿ 8 ಗಂಟೆ ಸುಮಾರಿಗೆ ಗ್ಯಾರೇಜ್‌ನಿಂದ ಕೆಲಸ ಮುಗಿಸಿಕೊಂಡು ಬರುತ್ತಿದ್ದ ದಯಾನತ್‌ ಖಾನ್‌ ನನ್ನು ಆತನ ಸ್ನೇಹಿತರು ಕರೆದೊಯ್ದ ಮುಖಕ್ಕೆ ಖಾರದ ಪುಡಿ ಎರಚಿ ಕೊಲೆಗೈದಿದ್ದರು. ವಿನಾಕಾರಣ ಕೊಲೆ ನಡೆಸಲಾಗಿದೆ ಎಂದು ಹೊನ್ನಾಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News