ರಾಜಧಾನಿಗೆ ನೀರು ಕೊಡಲು ಮೇಕೆದಾಟು ಸಾಕು: ಕುರುಬೂರು ಶಾಂತಕುಮಾರ್

Update: 2019-06-26 15:26 GMT

ಬೆಂಗಳೂರು, ಜೂ.26: ಮೇಕೆದಾಟು ಅಣೆಕಟ್ಟು ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ ರಾಜಧಾನಿಗೆ ನೀರು ಕೊಡಿ. ಲಿಂಗನಮಕ್ಕಿ ಜಲಾಶಯದಿಂದ ನೀರು ತರುವ ಹುನ್ನಾರವನ್ನು ಕೈ ಬಿಡಿ ಎಂದು ರಾಜ್ಯ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸರಕಾರವನ್ನು ಒತ್ತಾಯಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಬೆಳೆಯುತ್ತಿರುವ ಜನಸಂಖ್ಯೆಗೆ ರಾಜ್ಯದ ಎಲ್ಲೆಡೆ ಇರುವ ಜಲಾಶಯಗಳಿಂದ ನೀರು ತಂದರೂ ಸಾಲದು. ಅದರ ಬದಲು ಅಂತರ್ಜಲದ ಹೆಚ್ಚಳಕ್ಕೆ ಕಾರ್ಯಕ್ರಮ ರೂಪಿಸಿ, ಮೇಕೆದಾಟು ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಎಂದು ಸಲಹೆ ನೀಡಿದರು.

ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಗೆ ಸಂಬಂಧಿಸಿದ ಡಿಪಿಆರ್ ಈಗಾಗಲೇ ಕೇಂದ್ರ ಸರಕಾರದ ಕೈಲಿದೆ. ರಾಜ್ಯದ ಸಂಸದರು, ಅದರಲ್ಲೂ ಮುಖ್ಯವಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸೇರಿದಂತೆ ಬೆಂಗಳೂರಿನ ಸಂಸದರು ತಕ್ಷಣ ಈ ಯೋಜನೆಗೆ ಅಂಗೀಕಾರ ಕೊಡಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಆಗ್ರಹಿಸಿದರು.

ಕಳೆದ ವರ್ಷ ಕಾವೇರಿ ನದಿಯಿಂದ ತಮಿಳುನಾಡಿಗೆ 408 ಟಿಎಂಸಿ ನೀರು ಹರಿದು ಹೋಗಿದೆ. ವಾಸ್ತವವಾಗಿ ನಾವು ಅವರಿಗೆ ಕೊಡಬೇಕಿರುವುದು 177 ಟಿಎಂಸಿ. ಅಂದರೆ ಸುಮಾರು 240 ಟಿಎಂಸಿಯಷ್ಟು ನೀರು ಹೆಚ್ಚುವರಿಯಾಗಿ ಹರಿದು ಹೋಗಿದೆ. ಹೀಗೆ ಹೆಚ್ಚುವರಿಯಾಗಿ ಹರಿಯುವ ನೀರನ್ನು ಮೇಕೆದಾಟು ಯೋಜನೆಯ ಮೂಲಕ ಕನಿಷ್ಟ ನಲವತ್ತು ಟಿಎಂಸಿಯಷ್ಟು ನೀರು ಸಂಗ್ರಹಿಸಿದರೆ, ಬೆಂಗಳೂರಿಗೆ ಎರಡು ವರ್ಷ ನಿರಂತರವಾಗಿ ಕುಡಿಯುವ ನೀರು ಕೊಡಬಹುದು ಎಂದು ಅವರು ಹೇಳಿದರು.

ಹೀಗಾಗಿ ರಾಜಕೀಯ ಪಕ್ಷಗಳಿಗೆ ಇಚ್ಛಾಶಕ್ತಿ ಇದ್ದರೆ ಮೊದಲು ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ಮುಂದಾಗಲಿ. ಅದನ್ನು ಬಿಟ್ಟು ಲಿಂಗನಮಕ್ಕಿಯಿಂದ ಕುಡಿಯುವ ನೀರು ತರುತ್ತೇವೆ ಎಂಬುದು ಅವಾಸ್ತವಿಕ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.

ಬೆಂಗಳೂರಿನ ನೀರಿನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ನೀರು ತಂದರೆ ಸಾಲದು. ಬದಲಿಗೆ ನೀರು ಬಳಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಒಳಿತು. ಕಾರು ತೊಳೆಯಲು ಎಂಟು, ಹತ್ತು ಬಕೆಟ್ ನೀರು ಸುರಿಯುವುದರಿಂದ ಹಿಡಿದು ಹಲವು ರೀತಿಗಳಲ್ಲಿ ಬೆಂಗಳೂರಿನ ಬಹುತೇಕ ಜನ ನೀರು ಪೋಲು ಮಾಡುತ್ತಾರೆ. ಈ ರೀತಿ ನೀರನ್ನು ಪೋಲು ಮಾಡದಂತೆ ತಡೆಯುವ ಕೆಲಸ ತುರ್ತಾಗಿ ಆಗಬೇಕು ಎಂದು ಅವರು ಹೇಳಿದರು.

ಇಲ್ಲದಿದ್ದರೆ, ಕುಡಿಯುವ ನೀರನ್ನು ರೇಷನ್ ಪದ್ಧತಿಯಡಿ ಕೊಡುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದ ಅವರು, ಈಗಾಗಲೇ ನೀರಿನ ಅಭಾವ ಯಾವ ಮಟ್ಟಕ್ಕೆ ಕಾಡುತ್ತಿದೆ ಎಂದರೆ ಅದಾಗಲೇ ಕೃಷಿಗೆ ಕೊಡುವ ನೀರಿನ ಪ್ರಮಾಣ ಕಡಿಮೆಯಾಗಿದೆ. ನಾಳೆ ಕೃಷಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ಬಿದ್ದರೆ ಅನ್ನ ತಿನ್ನುವುದು ಕಷ್ಟದ ಕೆಲಸವಾಗುತ್ತದೆ. ಹಾಗೆಯೇ ಕುಡಿಯುವ ನೀರು ಸಿಗುವುದು ಕಷ್ಟವಾಗುತ್ತದೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.

ಹೀಗಾಗಿ ನೀರು ಪೋಲು ಮಾಡುವ ಜನರೂ ಎಚ್ಚೆತ್ತುಕೊಳ್ಳಬೇಕು. ಹಾಗೆಯೇ ಇದಕ್ಕೆ ಸಂಬಂಧಿಸಿದಂತೆ ಸರಕಾರವೂ ಅಗತ್ಯದ ನೀತಿ ನಿಯಮಾವಳಿಗಳನ್ನು ರೂಪಿಸಬೇಕು. ಲಿಂಗನಮಕ್ಕಿ ಜಲಾಶಯದಿಂದ ನೀರು ತರುವ ಯೋಜನೆ ಅವಾಸ್ತವಿಕ. ಹಾಗೆಯೇ ಪ್ರಕೃತಿಯ ಮೇಲೆ ಎಸಗುವ ದೌರ್ಜನ್ಯ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸರಕಾರ ಇಂತಹ ಅನಗತ್ಯ ಯೋಜನೆಗಳ ಕಡೆ ನೋಡುವ ಬದಲು ವಾಸ್ತವಿಕವಾಗಿರುವ, ಕಣ್ಣಿನ ಮುಂದೆ ಇರುವ ಮೇಕೆದಾಟು ಅಣೆಕಟ್ಟಿನ ನಿರ್ಮಾಣ ಕಾರ್ಯದ ಕಡೆ ಗಮನ ಹರಿಸಲಿ. ಆ ಮೂಲಕ ಬೆಂಗಳೂರಿಗೆ ಕುಡಿಯುವ ನೀರು ಕೊಡಲಿ ಎಂದು ಅವರು ಹೇಳಿದರು.

ಈಗ ಕೊಡುತ್ತಿರುವ ನೀರು ಮಂಡ್ಯ ಜಿಲ್ಲೆಯ ಕಾವೇರಿಗೆ ಹೊರೆಯಾಗಿದೆ. ಹಾಗೆಯೇ ಕಬಿನಿ ಸೇರಿದಂತೆ ಹಲವು ಮೂಲಗಳಿಂದ ನೀರು ಎತ್ತಲಾಗುತ್ತಿದೆ. ಆದುದರಿಂದ, ಸರಕಾರ ತಕ್ಷಣ ಎಚ್ಚೆತ್ತುಕೊಳ್ಳಲಿ. ರಾಜ್ಯದ ಸಂಸದರೂ ಕಾಳಜಿ ಇಟ್ಟುಕೊಂಡು ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಯತ್ನಿಸಲಿ ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News