ಬಿಜೆಪಿಯನ್ನು ಸೋಲಿಸಲು ಟಿಎಂಸಿ, ಕಾಂಗ್ರೆಸ್, ಸಿಪಿಎಂ ಒಗ್ಗೂಡಲಿ: ಮಮತಾ ಕರೆ

Update: 2019-06-26 15:46 GMT

ಕೋಲ್ಕತಾ,ಜೂ.26: ಭಾರತೀಯ ಜನತಾ ಪಕ್ಷವನ್ನು ಸೋಲಿಸಲು ಕಾಂಗ್ರೆಸ್, ಸಿಪಿಎಂ ಹಾಗೂ ಟಿಎಂಸಿ ಪರಸ್ಪರ ಕೈಜೋಡಿಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಕರೆ ನೀಡಿದ್ದಾರೆ.

 ರಾಜ್ಯ ವಿಧಾನಸಭಾ ಕಲಾಪದ ವೇಳೆ ಮಾತನಾಡುತ್ತಿದ್ದ ಅವರು, ಬಿಜೆಪಿಗೆ ಮತ ನೀಡಿದಲ್ಲಿ ಏನೇನಾಗುತ್ತದೆ ಎಂಬುದನ್ನು ಉತ್ತರ 24 ಪರಗಣ ಜಿಲ್ಲೆಯ ಭಟ್‌ಪಾರಾ ನಗರದ ಜನತೆ ಕಾಣುತ್ತಿದ್ದಾರೆ ಎಂದರು.

   ‘‘ ಬಿಜೆಪಿ ವಿರುದ್ಧ ಹೋರಾಡಲು ನಾವೆಲ್ಲರೂ (ಟಿಎಂಸಿ,ಕಾಂಗ್ರೆಸ್ ಹಾಗೂ ಸಿಪಿಎಂ) ಒಗ್ಗೂಡಬೇಕೆಂದು ನಾನು ಭಾವಿಸುತ್ತೇನೆ. ಇದಕ್ಕಾಗಿ ನಾವು ರಾಜಕೀಯವಾಗಿ ಕೈಜೋಡಿಸಬೇಕೆಂದು ಅರ್ಥವಲ್ಲ. ಆದರೆ ರಾಷ್ಟ್ರೀಯ ಮಟ್ಟದ ಸಾಮಾನ್ಯ ವಿಷಯಗಳ ವಿಚಾರವಾಗಿ ನಾವು ಒಟ್ಟಾಗಬಹುದಾಗಿದೆ’’ ಎಂದವರು ಹೇಳಿದ್ದಾರೆ.

 ಪಶ್ಚಿಮಬಂಗಾಳದಲ್ಲಿ ಪ್ರತಿಭಟನೆಯ ಬಿರುಗಾಳಿಯನ್ನು ಎಬ್ಬಿಸಿರುವ ‘ಕಟ್ ಮನಿ’ (ಲಂಚ) ವಿವಾದದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ ಮಮತಾ ಪಕ್ಷದ ಕಾರ್ಯಕರ್ತರನ್ನು ಶಿಸ್ತಿನಲ್ಲಿರಿಸಲು ಯತ್ನಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು. ಆದರೆ ಪುರಾವೆಗಳಿಲ್ಲದೆ ಯಾರ ವಿರುದ್ಧ ಕಳಂಕ ಹೊರಿಸಲು ಸಾಧ್ಯವಿಲ್ಲ ಎಂದರು.

 ಟಿಎಂಸಿಯ ಚುನಾಯಿತ ಪ್ರತಿನಿಧಿಗಳು ಫಲಾನುಭವಿಗಳಿಂದ ಕಟ್ ಮನಿ ಸ್ವೀಕರಿಸಬಾರದೆಂದು ಮಮತಾ ಭಾಷಣವೊಂದರಲ್ಲಿ ತಿಳಿಸಿದ್ದಾರೆ. ಅವರ ಈ ಹೇಳಿಕೆಯನ್ನು ಬಿಜೆಪಿ ಅಸ್ತ್ರವಾಗಿ ಬಳಸಿಕೊಂಡು ರಾಜ್ಯಾದ್ಯಂತ ಚಳವಳಿ ನಡೆಸುತ್ತಿದೆ.

  ಆಡಳಿತಾರೂಢ ಟಿಎಂಸಿ ಪಕ್ಷದ ಚುನಾಯಿತ ಪ್ರತಿನಿಧಿಗಳು ಸರಕಾರ ವಿವಿಧ ಯೋಜನೆಗಳ ಫಲಾನುಭವಿಗಳಿಂದ ತೆಗೆದುಕೊಳ್ಳುತ್ತಿದ್ದಾರೆನ್ನಲಾದ ಕಟ್ ಮನಿ (ಲಂಚ)ಯನ್ನು ಹಿಂದಿರುಗಿಸುವಂತೆ ಆಗ್ರಹಿಸಿ ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಬಿಜೆಪಿಯು ಪ್ರತಿಭಟನೆ ಹಾಗೂ ಧರಣಿಗಳನ್ನು ನಡೆಸುತ್ತಿದೆ.

ಸದನದಲ್ಲಿ ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಮಮತಾ ಅವರು ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಅಪರಿಚಿತವಾದ ಸಂಸ್ಕೃತಿಯೊಂದನ್ನು ತರಲು ಪ್ರಯತ್ನಿಸುತ್ತಿರುವುದಾಗಿ ಆರೋಪಿಸಿದರು.

ದೀರ್ಘ ಸಮಯದಿಂದ ಟಿಎಂಸಿಯ ಭದ್ರಕೋಟೆಯಾಗಿರುವ ಭಟ್‌ಪಾರಾದಲ್ಲಿ ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಆಗಾಗ್ಗೆ ಘರ್ಷಣೆಗಳು ನಡೆಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News