ಭಾರತ ವಿರುದ್ಧ ಸರಣಿಯ ಬಳಿಕ ಕ್ರಿಕೆಟ್‌ನಿಂದ ನಿವೃತ್ತಿ: ಕ್ರಿಸ್ ಗೇಲ್

Update: 2019-06-26 19:00 GMT

ಮ್ಯಾಂಚೆಸ್ಟರ್, ಜೂ.26: ವೆಸ್ಟ್‌ಇಂಡೀಸ್‌ನ ಆಕ್ರಮಣಕಾರಿ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಆಗಸ್ಟ್-ಸೆಪ್ಟಂಬರ್‌ನಲ್ಲಿ ಸ್ವದೇಶದಲ್ಲಿ ಭಾರತ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟೆಸ್ಟ್ ಸರಣಿಯ ಬಳಿಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದಾರೆ.

 ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಮುಗಿದ ಬಳಿಕ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ಕಳೆದ ತಿಂಗಳು 39ರ ಹರೆಯದ ಗೇಲ್ ಹೇಳಿಕೆ ನೀಡಿದ್ದರು. ಭಾರತ ವಿರುದ್ಧ ವಿಶ್ವಕಪ್ ಪಂದ್ಯದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಡಗೈ ಆಟಗಾರ ಗೇಲ್, ನಿವೃತ್ತಿಯ ಕುರಿತಂತೆ ತನ್ನ ಮನಸ್ಸು ಬದಲಿಸಿದ್ದಾಗಿ ಹೇಳಿದರು.

  ‘‘ನನ್ನ ವೃತ್ತಿಜೀವನ ವಿಶ್ವಕಪ್ ಟೂರ್ನಿಯೊಂದಿಗೆ ಅಂತ್ಯವಾಗುವುದಿಲ್ಲ. ನಾನು ಇನ್ನಷ್ಟು ಪಂದ್ಯಗಳಲ್ಲಿ ಆಡುವೆ. ಬಹುಶಃ ಇನ್ನೊಂದು ಸರಣಿಯನ್ನು ಆಡಬಹುದು. ಮುಂದೇನಾಗುತ್ತದೆಯೆಂದು ಯಾರಿಗೂ ಗೊತ್ತಿರುವುದಿಲ್ಲ. ವಿಶ್ವಕಪ್‌ನ ಬಳಿಕ ನಿವೃತ್ತಿಯ ಯೋಜನೆ ಹಾಕಿಕೊಂಡಿರುವೆ. ಭಾರತ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಿದರೆ, ಭಾರತ ವಿರುದ್ಧ ಖಂಡಿತವಾಗಿಯೂ ಏಕದಿನ ಪಂದ್ಯವನ್ನು ಆಡುವೆ’’ ಎಂದು ಗೇಲ್ ಹೇಳಿದ್ದಾರೆ.

ಭಾರತ ತಂಡ ವೆಸ್ಟ್‌ಇಂಡೀಸ್ ಪ್ರವಾಸದಲ್ಲಿ 3 ಟಿ-20 ಅಂತರ್‌ರಾಷ್ಟ್ರೀಯ ಸರಣಿ, 3 ಪಂದ್ಯಗಳ ಏಕದಿನ ಹಾಗೂ ಕೆಲವು ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ಈ ಹಿಂದೆ ವಿಂಡೀಸ್ ನಾಯಕರಾಗಿದ್ದ ಗೇಲ್ ಎರಡು ಬಾರಿ ಟಿ-20 ವಿಶ್ವಕಪ್‌ನ್ನು ಜಯಿಸಿದ್ದರು. ವಿಂಡೀಸ್ ಪರ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಗರಿಷ್ಠ ರನ್ ಗಳಿಸಿದ್ದಾರೆ. ವಿಶ್ವಕಪ್ ಪಂದ್ಯದಲ್ಲಿ 200 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿರುವ ಗೇಲ್ ಟೆಸ್ಟ್‌ನಲ್ಲಿ ತ್ರಿಶತಕ, ಏಕದಿನದಲ್ಲಿ ದ್ವಿಶತಕ ಹಾಗೂ ಟಿ-20ಯಲ್ಲಿ ಶತಕ ಸಿಡಿಸಿದ ಏಕೈಕ ದಾಂಡಿಗನಾಗಿದ್ದಾರೆ. ಗೇಲ್ 103 ಟೆಸ್ಟ್‌ನಲ್ಲಿ 7,215 ರನ್, 294 ಏಕದಿನ ಪಂದ್ಯಗಳಲ್ಲಿ 10, 345 ರನ್ ಹಾಗೂ 58 ಟಿ-20ಯಲ್ಲಿ 1,627 ರನ್ ಗಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News