ತಾರತಮ್ಯ ಮಾಡುವ ಅವಕಾಶವನ್ನು ಸಂವಿಧಾನ ನೀಡಿಲ್ಲ: ಸಿಎಂ ವಿರುದ್ಧ ಸಿ.ಟಿ.ರವಿ ಅಸಮಾಧಾನ

Update: 2019-06-28 17:57 GMT

ಮಡಿಕೇರಿ, ಜೂ. 28 : ಮೋದಿಗೆ ಓಟು ಹಾಕಿ ನನ್ನ ಬಳಿ ಬಂದು ಸಮಸ್ಯೆ ಕೇಳುತ್ತಿರಾ, ಹೋಗಿ ಮೋದಿಯವರನ್ನೇ ಕೇಳಿ ಎಂದು ಹೇಳಿರುವ ಮುಖ್ಯಮಂತ್ರಿ ವರ್ತನೆ ದುರಹಂಕಾರದ ಪರಮಾವಧಿ ಎಂದು ಟೀಕಿಸಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಜನರ ಸಮಸ್ಯೆಗಳನ್ನು ಪರಿಹರಿಸುವ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ತಾರತಮ್ಯ ಮಾಡುವ ಅವಕಾಶವನ್ನು ಸಂವಿಧಾನ ನೀಡಿಲ್ಲ ಎಂದು ಹೇಳಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರವಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಓಟು ಮೋದಿಗೆ ಕೆಲಸ ನಾವು ಮಾಡಬೇಕಾ ಎನ್ನುತ್ತಾರೆ. ಇದು “ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ”ಎಂಬ ಗಾದೆಯಂತ್ತಾಗಿದ್ದು, ಕೇಂದ್ರದ ಅನುದಾನವನ್ನು ತಮ್ಮದೆಂದು ಹೇಳಿಕೊಂಡು ತಿರುಗುವವರು ಇವರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಾತಿ ರಾಜಕಾರಣ ಮಾಡಿದ ಕಾರಣದಿಂದಲೇ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ಸೋಲಾಗಿದೆ, ಇವರ ಹಾಗೆ ಜಾತಿ ರಾಜಕಾರಣ ಮಾಡಿದ್ದರೆ ಮೋದಿ ಅವರನ್ನು ಕೂಡ ಸೋಲಿಸುತ್ತಿದ್ದರು ಎಂದರು. 

ಗ್ರಾಮ ವಾಸ್ತವ್ಯದ ನಾಟಕವಾಡುತ್ತಿರುವ ಸಿಎಂ ಕುಮಾರಸ್ವಾಮಿ ಅವರ ಕುಟುಂಬ ಮೂರು ತಲೆಮಾರಿನಿಂದ ರಾಜಕಾರಣ ಮಾಡುತ್ತಿದ್ದರೂ ಅವರಿಗೆ ಗ್ರಾಮೀಣ ಭಾಗ ಮತ್ತು ರೈತರ ಸಮಸ್ಯೆಗಳ ಬಗ್ಗೆ ಅರ್ಥ ಆಗಿಲ್ಲವೇ ಎಂದು ಪ್ರಶ್ನಿಸಿದ ರವಿ ಅರ್ಥ ಆಗದೇ ಇದ್ದರೆ ಅದು ದುರಾದೃಷ್ಟಕರ ಎಂದು ಟೀಕಿಸಿದರು.  

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ರಾಜ್ಯಾಧ್ಯಕ್ಷರ ಸ್ಥಾನ ಒಂದು ಅಧಿಕಾರದ ಹುದ್ದೆ ಅಲ್ಲ. ಅದೊಂದು ಸಂಘಟನೆ ಕಟ್ಟುವ ದೊಡ್ಡ ಜವಬ್ದಾರಿ, ಅಧಿಕಾರದ ಹುದ್ದೆ ಆಗಿದ್ದರೆ ಅದಕ್ಕೆ ಸ್ಪರ್ಧೆ ಇರುತ್ತದೆ. ಆದರೆ ರಾಜ್ಯಾಧ್ಯಕ್ಷ ಸ್ಥಾನವನ್ನು ಯಾರಿಗೆ ನೀಡಬೇಕು ಎನ್ನುವುದನ್ನು ಪಕ್ಷದ ಹಿರಿಯರು ನಿರ್ಧಾರ ಮಾಡುತ್ತಾರೆ. ಪಕ್ಷದಲ್ಲಿ ಯೋಗ್ಯತೆ ಇರುವವರು ಇದ್ದಾರೆ. ಆದರೆ ನಮಗೆ ನಾವೇ ಹೊಗಳಬಾರದು, ಹಾಗೆಯೇ ಕೀಳರಿಮೆ ಕೂಡ ಇರಬಾರದು. ಸಂದರ್ಭಕ್ಕೆ ಸೂಕ್ತ ಯಾರಾಗುತ್ತಾರೋ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗುತ್ತೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News