ಗೋರಕ್ಷಕರಿಂದ ಥಳಿತಕ್ಕೊಳಗಾಗಿ ಮೃತಪಟ್ಟ ಪೆಹ್ಲೂ ಖಾನ್ ವಿರುದ್ಧ ಚಾರ್ಜ್ ಶೀಟ್!

Update: 2019-06-29 15:55 GMT

ಜೈಪುರ್, ಜೂ.29: ಎರಡು ವರ್ಷಗಳ ಹಿಂದೆ ಆಲ್ವಾರ್ ನಲ್ಲಿ ಗೋರಕ್ಷಕರಿಂದ ಥಳಿತಕ್ಕೊಳಗಾಗಿ ಮೃತಪಟ್ಟಿದ್ದ ಹೈನು ಕೃಷಿಕ ಪೆಹ್ಲೂ ಖಾನ್ ವಿರುದ್ಧ  ಅಕ್ರಮ ಗೋಸಾಗಾಟ ಆರೋಪದ ಮೇಲೆ ರಾಜಸ್ಥಾನ ಪೊಲೀಸರು ಚಾರ್ಚ್ ಶೀಟ್ ಸಲ್ಲಿಸಿದ್ದಾರೆ. ಪೆಹ್ಲೂ ಖಾನ್ ಅವರ ಇಬ್ಬರು ಪುತ್ರರ ಹೆಸರುಗಳ ಜತೆಗೆ ಗೋ ಸಾಗಣಿಕೆಗೆ ಬಳಸಲ್ಪಟ್ಟ ಪಿಕಪ್ ಚಾಲಕನ ಹೆಸರೂ ಚಾರ್ಜ್ ಶೀಟ್ ನಲ್ಲಿದೆ. ಬೆಹ್ರೋರ್ ಸಮೀಪ ಈ ಘಟನೆ ಎಪ್ರಿಲ್ 1, 2017ರಂದು ನಡೆದಿತ್ತು.

ಇದೀಗ ಪೆಹ್ಲೂ ಖಾನ್ ವಿರುದ್ಧ ಮರಣೋತ್ತರವಾಗಿ ಸಲ್ಲಿಕೆಯಾಗಿರುವ ಚಾರ್ಜ್ ಶೀಟ್ ಕಳೆದ ವರ್ಷದ ಡಿಸೆಂಬರ್ 30ರಂದು ಸಿದ್ಧಗೊಂಡಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ವಹಿಸಿಕೊಂಡು ಕೆಲವೇ ದಿನಗಳಾಗಿದ್ದವು. ಚಾರ್ಜ್ ಶೀಟ್ ಅನ್ನು ಈ ವರ್ಷದ ಮೇ 29ರಂದು ಬೆಹ್ರೋರ್ ನ ಹೆಚ್ಚುವರಿ ಮುಖ್ಯ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.

ಖಾನ್ ಮತ್ತವರ ಪುತ್ರರ ವಿರುದ್ಧ ರಾಜಸ್ಥಾನ  ಗೋಹತ್ಯೆ ಹಾಗೂ ಸಾಗಾಟ ನಿಷೇಧ ಕಾಯಿದೆ 1995 ಇದರ ಸೆಕ್ಷನ್  5, 8 ಹಾಗೂ 9ರ ಅನ್ವಯ  ದಾಖಲಾಗಿದೆ.

``ರಾಜಸ್ಥಾನದ ಹೊಸ ಕಾಂಗ್ರೆಸ್ ಸರಕಾರ ನಮ್ಮ ವಿರುದ್ಧದ ಪ್ರಕರಣಗಳನ್ನು ಮರು ಪರಿಶೀಲಿಸಿ ಅದನ್ನು ವಾಪಸ್ ಪಡೆಯಬಹುದೆಂಬ ಆಶಾವಾದದಲ್ಲಿ ನಾವಿದ್ದರೆ  ಇದೀಗ ನಮ್ಮ ವಿರುದ್ಧವೇ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ'' ಎಂದು ಪೆಹ್ಲೂ ಖಾನ್ ಅವರ ಹಿರಿಯ ಪುತ್ರ ಇರ್ಷಾದ್ ಹೇಳಿದ್ದಾರೆ. ಖಾನ್ ಕಿರಿಯ ಪುತ್ರ ಆರಿಫ್ ಹೆಸರು ಕೋಡ ದೋಷಾರೋಪ ಪಟ್ಟಿಯಲ್ಲಿದೆ.

ಕಳೆದ ವರ್ಷ ರಾಜಸ್ಥಾನದ ಹಿಂದಿನ ಬಿಜೆಪಿ ಸರಕಾರ ಕೂಡ ಇಂತಹುದೇ ಚಾರ್ಜ್ ಶೀಟ್ ಅನ್ನು ಪೆಹ್ಲೂ ಖಾನ್ ಅವರ ಇಬ್ಬರು ಸಹವರ್ತಿಗಳಾದ ಅಝ್ಮತ್ ಹಾಗೂ ರಫೀಕ್ ಮತ್ತು ಪಿಕಪ್ ಚಾಲಕ  ಅರ್ಜುನ್ ಹಾಗೂ ಮಾಲಕ ಜಗದೀಶ್ ಪ್ರಸಾದ್ ವಿರುದ್ಧ ಸಲ್ಲಿಸಿತ್ತು. ಪೆಹ್ಲೂ ಖಾನ್ ಜತೆ ಆ ದಿನ ಅಝ್ಮತ್ ಹಾಗೂ ರಫೀಕ್ ಕೂಡ ಹಲ್ಲೆಗೊಳಗಾಗಿದ್ದರು.

 ‘‘ಪ್ರಕರಣದ ಆರೋಪಿಗಳು ಮುಕ್ತವಾಗಿ ತಿರುಗಾಡುತ್ತಿರುವ ಹೊರತಾಗಿಯೂ ಪೊಲೀಸರು ನಮ್ಮ ವಿರುದ್ಧ ಆರೋಪ ಪಟ್ಟಿ ದಾಖಲಿಸಿದ್ದಾರೆ. ಪೊಲೀಸರು ಸರಿಯಾಗಿ ತನಿಖೆ ಮಾಡಿಲ್ಲ. ಅವರು ಪಿತೂರಿಯ ಒಂದು ಭಾಗ. ನಕಲಿ ಗೋರಕ್ಷಕರು ನನ್ನ ತಂದೆಯನ್ನು ಕೊಂದರು. ಆದರೆ, ಪೊಲೀಸರು ಎಲ್ಲದಕ್ಕೂ ನಾವೇ ಕಾರಣ ಎಂದು ಹೇಳುತ್ತಿದ್ದಾರೆ. ಇದು ಅನ್ಯಾಯ.’’

ಇರ್ಷಾದ್ ಖಾನ್, ಪೆಹ್ಲು ಖಾನ್ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News