ಹಿಂದಿ ಹೇರುವ ಕೇಂದ್ರದ ಕ್ರಮ ಪ್ರಾದೇಶಿಕ ಭಾಷೆಗಳಿಗೆ ಮಾರಕ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-06-30 12:27 GMT

ಬಾಗಲಕೋಟೆ, ಜೂ. 30: ಕೇಂದ್ರ ಜಾರಿಗೆ ತರಲು ಉದ್ದೇಶಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರಾದೇಶಿಕ ಭಾಷೆಗಳಿಗೆ ಮಾರಕ. ಒಕ್ಕೂಟ ವ್ಯವಸ್ಥೆಯ ನಮ್ಮ ದೇಶದಲ್ಲಿ ಹಿಂದಿ ಭಾಷೆಯ ಬಲವಂತ ಹೇರಿಕೆ ಸರಿಯಾದ ಕ್ರಮವಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.

ರವಿವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಬೆಳಗಾವಿ ವಿಭಾಗದಲ್ಲಿ 2018-19ನೆ ಸಾಲಿನ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ರಾಜ್ಯ ಹಾಗೂ ತಾಲೂಕು ಮಟ್ಟದಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಾಗಲಕೋಟೆಯ ನವನಗರದ ಕಲಾಭವನದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಮಾಧ್ಯಮ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.

ಪ್ರಾದೇಶಿಕ ಭಾಷೆಗಳನ್ನು ರಕ್ಷಿಸುವ ಹಾಗೂ ಆ ಕುರಿತು ತನ್ನ ಬದ್ಧತೆಯನ್ನು ನಾವು ಪ್ರದರ್ಶಿಸಲೇಬೇಕಾದ ಅಗತ್ಯವಿದೆ. ಕೇಂದ್ರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಹೊರಟಿದ್ದು, ಆ ಕುರಿತು ರಾಜ್ಯಗಳ ಆಕ್ಷೇಪಣೆ, ಅಭಿಪ್ರಾಯ ಆಹ್ವಾನಿಸಿದೆ. ಆ ತಕ್ಷಣವೇ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸಿದೆ. ಇದನ್ನು ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ತನ್ನ ವಿರೋಧ ವ್ಯಕ್ತಪಡಿಸಿದೆ. ಹಾಗೆಯೇ ರಾಜ್ಯ ಸರಕಾರವೂ ಅದನ್ನು ವಿರೋಧಿಸಿ ಕೇಂದ್ರಕ್ಕೆ ಪತ್ರ ಬರೆದಿದೆ ಎಂದು ಅವರು, ತಾವು ಸಿಎಂ ಆಗಿದ್ದಾಗ ಕನ್ನಡದ ಹಿತರಕ್ಷಣೆಗೆ ಕ್ರಮ ಕೈಗೊಂಡಿತ್ತು. ಮೆಟ್ರೋ ರೈಲು ನಿಲ್ದಾಣಗಳಲ್ಲಿ ಹಾಕಿದ ಹಿಂದಿ ನಾಮಫಲಕಗಳನ್ನು ತೆಗೆಸಿದೆ. ಕನ್ನಡ ಮತ್ತು ಇಂಗ್ಲಿಷ್ ಫಲಕಗಳಷ್ಟೆ ಸಾಕು. ಹಿಂದಿಯ ನಾಮಫಲಕಗಳ ಅಗತ್ಯವೇನಿದೆ ಎಂದು ಪ್ರಶ್ನಿಸಿದರು. ನಮ್ಮ ನ್ಯಾಯಾಲಯಗಳ ನಮ್ಮ ಭಾಷಾ ಮಾಧ್ಯಮದ ಪರ ಇಲ್ಲ. ನಾನು ಸಿಎಂ ಆಗಿದ್ದಾಗ ಸುಪ್ರೀಂ ಕೋರ್ಟ್, ಭಾಷಾ ಮಾಧ್ಯಮ ಆಯ್ಕೆ ಸರಕಾರದ ಕೆಲಸವಲ್ಲ, ಅದು ಪೋಷಕರ ಆಯ್ಕೆ ಎಂದು ತೀರ್ಪು ನೀಡಿತು. ನಮ್ಮ ಪೋಷಕರು ಹಾಗೂ ಆಂಗ್ಲ ಮಾಧ್ಯಮ ಶಾಲೆಗಳು ಈ ತೀರ್ಪಿನ ಪ್ರಯೋಜನ ಪಡೆದುಕೊಂಡು ಇಂಗ್ಲಿಷ್ ಮಾಧ್ಯಮಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ ಎಂದರು.

ತೀರ್ಪು ಬಂದ ಸಮಯದಲ್ಲಿ ನಾನು ಎಲ್ಲ ರಾಜ್ಯಗಳ ಸಿಎಂಗಳು ಮತ್ತು ಪ್ರಧಾನಿಗೆ ಪತ್ರ ಬರೆದೆ, ಯಾರೂ ಆ ಕುರಿತು ಆಸಕ್ತಿ ತಾಳಲಿಲ್ಲ ಎಂದ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಹೆಸರು ಕನ್ನಡ ಕಾವಲು ಸಮಿತಿ, 1983ರಲ್ಲಿ ಮೊದಲ ಬಾರಿ ಪಕ್ಷೇತರ ಶಾಸಕನಾಗಿ ಆಯ್ಕೆಯಾಗಿದ್ದ ವೇಳೆ ಇದರ ಮೊದಲ ಅಧ್ಯಕ್ಷನಾಗಿ ಕನ್ನಡದ ರಕ್ಷಣೆಗೆ ಕೆಲಸ ಮಾಡಿದ್ದೆ. ಸರಕಾರಿ ಕಚೇರಿಗಳಿಗೆ ಭೇಟಿ ನೀಡಿ ಕಡತಗಳಲ್ಲಿ ಕನ್ನಡದಲ್ಲಿ ನಿರೂಪಣೆ ಬರೆಯಬೇಕೆಂದು ಎಚ್ಚರಿಸುತ್ತಿದ್ದೆ ಎಂದರು.

ನಮ್ಮ ನೆಲದ ಭಾಷೆಯ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವುದರಿಂದ ಹೆಚ್ಚಿನ ಗ್ರಹಿಕೆ ದೊರೆತು, ಹೆಚ್ಚಿನ ಜ್ಞಾನ ಪಡೆಯಲು ಸಾಧ್ಯವಾಗುತ್ತದೆ. ಸಿಎನ್‌ಆರ್ ರಾವ್ ಅವರಂತಹ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿಗಳೂ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಯಲ್ಲೇ ಪಡೆದವರು. ನಾನೂ ಕನ್ನಡ ಶಾಲೆಯಲ್ಲೇ ಕಲಿತವನು. ನಾವು ನಮ್ಮ ಭಾಷೆ ಕುರಿತು ಬದ್ಧತೆ, ಕಾಳಜಿ ಹೊಂದಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಅಗತ್ಯವಿದ್ದರೆ 100 ಭಾಷೆ ಕಲಿಯಿರಿ. ಆದರೆ, ಪ್ರಾಥಮಿಕ ಶಿಕ್ಷಣವನ್ನು ಮಾತ್ರ ನಮ್ಮ ನೆಲದ ಭಾಷೆಯ ಮಾಧ್ಯಮದಲ್ಲೇ ಕಲಿಯಬೇಕು. ನಾವು ನಮ್ಮ ನೆಲದ ಭಾಷೆಯನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ. ನಾವು ಉಳಿಸದಿದ್ದರೆ ನಮ್ಮ ಭಾಷೆಯನ್ನು ಯಾರು ಉಳಿಸಬೇಕು ಎಂದು ಪ್ರಶ್ನಿಸಿದರು.

ನಮ್ಮ ಭಾಷೆ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ. ನಮ್ಮ ಬದುಕು ಉಳಿಯುತ್ತದೆ. ನಮ್ಮ ಪ್ರದೇಶ ಉಳಿಯುತ್ತದೆ, ನಾವು ಉಳಿಯುತ್ತೇವೆ. ಯಾವುದೇ ಕಾರಣಕ್ಕೂ ನಮ್ಮ ನೆಲದ ಭಾಷೆಯ ಕಡೆಗಣನೆ ಸಲ್ಲ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

ಸಚಿವ ಶಿವಾನಂದ ಪಾಟೀಲ ಮಾತನಾಡಿ, ಕನ್ನಡ ನೆಲ, ಜಲ, ನಾಡು, ನುಡಿಯ ವಿಷಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಯಾವಾಗಲೂ ತನ್ನ ಬದ್ಧತೆ ವ್ಯಕ್ತಪಡಿಸುತ್ತಿದೆ. ಕನ್ನಡ ನೆಲ, ಜಲ, ಭಾಷೆಯ ವಿಷಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೂ ನಮ್ಮ ಸರಕಾರದ ಬೆಂಬಲವಿದೆ. ಬೇರೆ ಭಾಷೆಗಳಿಗಿಂತ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದರಿಂದ ನಾವು ಉತ್ತಮ ಜ್ಞಾನ ಪಡೆಯಲು ಸಾಧ್ಯ ಎಂದರು.

ಭಾಷಾ ನೀತಿಯ ಅಗತ್ಯವಿದೆ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಒಕ್ಕೂಟ ವ್ಯವಸ್ಥೆಯುಳ್ಳ ನಮ್ಮ ದೇಶಕ್ಕೆ ಸಮರ್ಪಕವಾದ ಭಾಷಾ ನೀತಿಯೊಂದರ ಅಗತ್ಯವಿದೆ. ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿದ್ದ ವೇಳೆ ಕನ್ನಡದ ಕುರಿತು ಅವರ ವಹಿಸಿದ ಕಾಳಜಿ ಮತ್ತು ಬದ್ಧತೆ ಪ್ರದರ್ಶಿಸಿದ್ದರು ಎಂದರು.

ಮುಚ್ಚಿ ಹೋದ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಕ್ರಮ ವಹಿಸಿದ್ದರು. ಭಾಷಾ ನೀತಿ ಅಧಿಸೂಚನೆ ಹೊರಡಿಸಿ ಅದರಂತೆ ರಾಜ್ಯದಲ್ಲಿನ ಕೇಂದ್ರ ಪಠ್ಯದ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಡ್ಡಾಯಗೊಳಿಸಿದರು. ಆದರೆ, ಅದು ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿದೆ ಎಂಬುದನ್ನು ನಮ್ಮ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದರು. ಒಂದು ಇಂಗ್ಲಿಷ್ ಶಾಲೆ ತೆರೆದರೆ ಆ ಸುತ್ತಮುತ್ತಲ 25-30 ಕನ್ನಡ ಶಾಲೆಗಳು ಮುಚ್ಚುತ್ತವೆ, ಇಲ್ಲವೆ ವಿಲೀನವಾಗುತ್ತವೆ. ಇದರಿಂದ ನಮ್ಮ ಗ್ರಾಮೀಣ ಬಾಲಕಿಯರು ಶಿಕ್ಷಣದಿಂದ ವಂಚಿತರಾಗುತ್ತಾರೆಂಬುದನ್ನು ನಮ್ಮ ಸರಕಾರಗಳು ಅರಿಯಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿಲ್ಲಾ ಕಸಾಪ ಅಧ್ಯಕ್ಷ ಶ್ರೀಶೈಲ ಈರಪ್ಪ ಕರಿಕಶಂಕರಿ, ಹಂಪಿ ಕನ್ನಡ ವಿವಿ ನಿಕಟಪೂರ್ವ ಕುಲಪತಿ ಮಲ್ಲಿಕಾ ಘಂಟಿ, ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಜಿಲ್ಲಾಧಿಕಾರಿ ರಾಮಚಂದ್ರನ್, ಜಿಪಂ ಸಿಇಒ ಗಂಗೂಬಾಯಿ ಮಾನಕರ, ಚಿಂತಕ ರುದ್ರಪ್ಪ ಹನಗವಾಡಿ ಹಾಜರಿದ್ದರು.

ಯಾವ ರಾಜ್ಯದಲ್ಲಿದ್ದೇವೆಂಬ ಅನುಮಾನ

‘ಕನ್ನಡಿಗರಲ್ಲಿ ಭಾಷಾಭಿಮಾನದ ಕೊರತೆ ಇದೆ. ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಶೇ.80ರಷ್ಟು ಅನ್ಯ ಭಾಷಿಗರ ಪ್ರಾಬಲ್ಯವಿದೆ. ಇಲ್ಲಿ ನಾವು ಯಾವ ರಾಜ್ಯದಲ್ಲಿದ್ದೇವೆಂಬ ಅನುಮಾನ ಕಾಡುವಂತಿದೆ ಪರಿಸ್ಥಿತಿ. ಇದಕ್ಕೆಲ್ಲ ನಮ್ಮ ಭಾಷಾಭಿಮಾನದ ಕೊರತೆಯೆ ಕಾರಣ. ಕೆಲವರು ಎಷ್ಟೇ ವರ್ಷಗಳಿದ್ದರೂ ಬೆಂಗಳೂರಿನಲ್ಲಿ ಕನ್ನಡ ಕಲಿಯದೇ ಬದುಕುತ್ತಿದ್ದಾರೆ’

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News