ಏಳನೇ ಸುತ್ತಿನ ಶಾಂತಿ ಮಾತುಕತೆ ನಿರ್ಣಾಯಕ: ತಾಲಿಬಾನ್

Update: 2019-06-30 18:03 GMT

 ಇಸ್ಲಾಮಾಬಾದ್,ಜೂ.30: ಅಮೆರಿಕ ಹಾಗೂ ತಾಲಿಬಾನ್ ಬಂಡುಕೋರರ ನಡುವೆ ಆರಂಭಗೊಂಡಿರುವ ಏಳನೇ ಹಾಗೂ ನೂತನ ಸುತ್ತಿನ ಶಾಂತಿ ಮಾತುಕತೆಗಳು ಅತ್ಯಂತ ನಿರ್ಣಾಯಕವಾದುದೆಂದು ತಾಲಿಬಾನ್ ವಕ್ತಾರ ಸುಹೈಲ್ ಶಾಹೀನ್ ರವಿವಾರ ತಿಳಿಸಿದ್ದಾನೆ. ತಾಲಿಬಾನ್ ಬಂಡುಕೋರರ ಪ್ರತಿನಿಧಿಗಳು, ಅಮೆರಿಕದ ಶಾಂತಿ ರಾಯಭಾರಿ ಝಲ್ಮೆಯ್ ಖಲೀಲ್‌ಝಾದ್ ಜೊತೆ ರವಿವಾರ ಎರಡನೆ ಸುತ್ತಿನ ಮಾತುಕತೆ ನಡೆಸಿದ ಬಳಿಕ ಶಾಹೀನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.

  ಅಫ್ಘಾನಿಸ್ತಾನದಿಂದ 20 ಸಾವಿರ ಅಮೆರಿಕ ಹಾಗೂ ನ್ಯಾಟೊ ಸೈನಿಕರ ನಿರ್ಗಮನ ಹಾಗೂ ಆ ದೇಶದಲ್ಲಿ ದೀರ್ಘ ಸಮಯದಿಂದ ಅಮೆರಿಕ ನಡೆಸುತ್ತಿರುವ ಯುದ್ಧವನ್ನು ಕೊನೆಗೊಳಿಸುವುದಕ್ಕೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಐದು ಅಂಶಗಳ ಒಪ್ಪಂದಗಳ ಜಾರಿಗಾಗಿ ಕಾರ್ಯತಂತ್ರವೊಂದನ್ನು ರೂಪಿಸಲು ಉಭಯತಂಡಗಳು ಯತ್ನಿಸುತ್ತಿವೆಯೆಂದು ಶಾಹೀನ್ ಹೇಳಿದ್ದಾನೆ.

   ಈ ಒಪ್ಪಂದದ ಪ್ರಕಾರ ಮುಂದಿನ ದಿನಗಳಲ್ಲಿ ವಿಶ್ವದಾದ್ಯಂತ ದಾಳಿಗಳನ್ನು ನಡೆಸುವ ಭಯೋತ್ಪಾದಕರಿಗೆ ಅಫ್ಘಾನಿಸ್ತಾನವು ಅಶ್ರಯ ನೀಡುವುದಿಲ್ಲವೆಂಬುದನ್ನು ಈ ಒಪ್ಪಂದವು ಖಾತರಿಪಡಿಸುತ್ತದೆ.

ಶನಿವಾರ ಮಾತುಕತೆ ಆರಂಭಗೊಂಡಿದ್ದು, ಅದು ಮುಂದಿನವಾರದವರೆಗೂ ಮುಂದುವರಿಯುವ ನಿರೀಕ್ಷೆಯಿದೆ. ಸೆಪ್ಟೆಂಬರ್ 1ರೊಳಗೆ ಅಫ್ಘಾನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಒಪ್ಪಂದವೊಂದು ಏರ್ಪಡುವ ಬಗ್ಗೆ ತಾನು ಆಶಾವಾದವನ್ನು ಹೊಂದಿರುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿಕೆ ನೀಡಿದ ಕೆಲವೇ ದಿನಗಳ ಬಳಿಕ ಉಭಯ ತಂಡಗಳ ನಡುವೆ ಏಳನೆ ಸುತ್ತಿನ ಮಾತುಕತೆ ಆರಂಭಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News