ದೇಶದ ಅರ್ಥಿಕತೆಗೆ ಸ್ಲಂ ಜನರ ಕೊಡುಗೆ ಅಪಾರ: ತುಮಕೂರು ಜಿಲ್ಲಾಧಿಕಾರಿ ರಾಕೇಶ್ ಕುಮಾರ್

Update: 2019-06-30 18:46 GMT

ತುಮಕೂರು,ಜೂ.30: ಭಾರತ ದೇಶ ಭವಿಷ್ಯದಲ್ಲಿ 5 ಬಿಲಿಯನ್ ಎಕನಾಮಿಯ ಗುರಿಯನ್ನು ಹೊಂದಿದ್ದು, ಇದಕ್ಕೆ ಶ್ರಮಸಂಸ್ಕೃತಿಯಿಂದಲೇ ಬದುಕುತ್ತಿರುವ ಸ್ಲಂ ಜನರ ಕೊಡುಗೆ ಪೂರಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ರಾಕೇಶ್ ಕುಮಾರ್ ಹೇಳಿದ್ದಾರೆ.

ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸ್ಲಂ ಜನಾಂದೋಲನ ಕರ್ನಾಟಕ ವತಿಯಿಂದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಸ್ಲಂ ನಿವಾಸಿಗಳ ಸಮಾವೇಶ ಮತ್ತು ಶ್ರಮ ಸಂಸ್ಕೃತಿಯ ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದ ಅವರು, ನಮ್ಮ ದೇಶ ಅಭಿವೃದ್ಧಿಶೀಲ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದರೆ, ಅದಕ್ಕೆ ಇಲ್ಲಿರುವ ಮಾನವ ಸಂಪತ್ತು ಮುಖ್ಯವಾಗುತ್ತದೆ. ಇಂತಹ ಮಾನವ ಸಂಪತ್ತನ್ನು ನಗರ ಪ್ರದೇಶದಲ್ಲಿ ಸ್ಲಂ ಜನರು ಮತ್ತು ಗ್ರಾಮಾಂತರ ಪ್ರದೇಶದಲ್ಲಿ ರೈತ ಕೂಲಿ ಕಾರ್ಮಿಕರು ನೀಡುತ್ತಿದ್ದು, ಇದು ದೇಶದ ಆರ್ಥಿಕತೆಯನ್ನು ವೃದ್ಧಿಸಲು ಪ್ರಮುಖ ಕಾರಣವಾಗುತ್ತದೆ ಎಂದರು.

ಮುಂಬೈನ ಹೃದಯ ಭಾಗದಲ್ಲಿರುವ ದಾರಾವಿ ಸ್ಲಂನ ಅಧ್ಯಯನದಿಂದ ಹೊರಬಂದಿರುವ ಅಂಶವೆಂದರೆ, ಸಿನಿಮಾ ಉದ್ಯಮ, ಕೈಗಾರಿಕೆಗಳು ಹಾಗೂ ಅಂತರ್ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಉದ್ಯಮಕ್ಕೆ ಈ ಸ್ಲಂ ಜನರ ಕೊಡುಗೆ ಪ್ರಮುಖವಾಗಿರುತ್ತದೆ. ಇದೇ ರೀತಿ ನಗರದ ಹೃದಯ ಭಾಗದಲ್ಲಿರುವ ಕೊಳಗೇರಿ ನಿವಾಸಿಗಳ ಮಾನವ ಶ್ರಮದಿಂದ ನಗರಗಳ ಚಲನೆ ಮತ್ತು ಆರ್ಥಿಕತೆಯ ಚಲನೆ ಇರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸ್ಲಂಗಳು ಸಮಸ್ಯೆಗಳಲ್ಲ, ಕಳೆದ ಹತ್ತು ವರ್ಷಗಳ ಹಿಂದೆ ಅವಕಾಶಗಳು ಕಡಿಮೆ ಇದ್ದವು. ಆದರೆ ಇಂದು ಅವಕಾಶಗಳು ವಿಪುಲವಾಗಿದ್ದು, ಇದರಿಂದ ಶಿಕ್ಷಣ, ಸರಕಾರಿ ಸೌಲಭ್ಯಗಳು, ಸ್ವಯಂ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಗಳನ್ನು ಪಡೆದು ಸಾಮಾಜಿಕವಾಗಿ ಮತ್ತು ಅರ್ಥಿಕವಾಗಿ ಸದೃಢರಾಗಬೇಕಾಗಿದೆ. ಸ್ಲಂ ಪ್ರದೇಶಕ್ಕೆ ಪರ್ಯಾಯವಾಗಿ ಕಡಿಮೆ ಆದಾಯ ಹೊಂದಿರುವ ಶ್ರಮ ಜೀವಿಗಳ ತಾಣವೆಂದು ಸಮಾಜ ನೋಡಬೇಕಿದೆ. ಪ್ರಧಾನಮಂತ್ರಿಗಳ ಕೊಳಗೇರಿ ಮುಕ್ತ ಯೋಜನೆಯಲ್ಲಿ 2022ಕ್ಕೆ ಎಲ್ಲಾ ಜನರಿಗೆ ಸೂರು ಕಲ್ಪಿಸುವ ಕನಸು ಹೊಂದಿದ್ದು, ಅದೇ ರೀತಿ ರಾಜ್ಯದ ಮುಖ್ಯಮಂತ್ರಿಗಳ ನಗರ ವಸತಿ ಯೋಜನೆಯ, ಅಂಬೇಡ್ಕರ್ ನಿವಾಸ್ ಯೋಜನೆಯಲ್ಲಿ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಹಾಗೂ ಈ ಸಮಾವೇಶದಲ್ಲಿ ಸಲ್ಲಿಸಿರುವ ಹಕ್ಕೊತ್ತಾಯಗಳ ಬಗ್ಗೆ ಸಭೆ ಕರೆದು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲಾಗುವುದೆಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

ತುಮಕೂರು ನಗರದ ಶಾಸಕರಾದ ಜಿ.ಬಿ ಜ್ಯೋತಿ ಗಣೇಶ್ ಮಾತನಾಡಿ, ಇಡೀ ನಗರದಲ್ಲಿ 21 ಸಾವಿರಕ್ಕೂ ಮೇಲ್ಪಟ್ಟು ನಿವೇಶ ಮತ್ತು ವಸತಿ ರಹಿತ ಬಡಕುಟುಂಬಗಳಿದ್ದು ಈ ಕುಟುಂಬಗಳಿಗೆ ಸೈಟ್ ನೀಡಲು ಜಿಲ್ಲಾಡಳಿತ ಭೂಮಿ ನೀಡಬೇಕು. ಹಕ್ಕುಪತ್ರ ಸಂಬಂಧಿಸಿದಂತೆ ರಾಜ್ಯ ಸರಕಾರ ತೀರ್ಮಾನ ತಗೆದುಕೊಳ್ಳಬೇಕಿದೆ. ಕೊಳಗೇರಿ ಜನರ ಮಾನವ ಸಂಪತ್ತಿನಿಂದ ಮಾರುಕಟ್ಟೆ ವ್ಯವಸ್ಥೆ ನಿಂತಿದ್ದು, ತುಮಕೂರಿನ ಮಂಡಿಪೇಟೆ, ಎಪಿಎಂಸಿ, ಮಾರುಕಟ್ಟೆ ಹಾಗೂ ನಗರದ ಅಭಿವೃದ್ಧಿಗೆ ಕೊಳಗೇರಿ ಜನರ ಕೊಡುಗೆ ಪ್ರಮುಖವಾಗಿದೆ. ದಿಬ್ಬೂರಿನ ದೇವರಾಜು ಅರಸು ಬಡಾವಣೆಯ ಕುಡಿಯುವ ನೀರಿನ ಸಮಸ್ಯೆ ಮತ್ತು ಇನ್ನಿತರೆ ಮೂಲಭೂತ ಸಮಸ್ಯೆಗಳನ್ನು 6 ತಿಂಗಳಲ್ಲಿ ಬಗೆಹರಿಸದಿದ್ದಲ್ಲಿ ನಾನೂ ನಿಮ್ಮ ಜೊತೆ ಸೇರಿ ಹೋರಾಟದಲ್ಲಿ ಮುಂದಾಗುತ್ತೇನೆ. ಕೆಲವೊಂದು ಬದಲಾವಣೆಗೆ ಸಮಯಾವಕಾಶ ಬೇಕಿದ್ದು, ತಾವು ಸಹಕಾರ ನೀಡಬೇಕೆಂದರು.

ವೇದಿಕೆಯಲ್ಲಿ ನಗರ ಪಾಲಿಕೆಯ ಸಾರ್ವಜನಿಕ ಲೆಕ್ಕಪತ್ರ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಜಿ.ಪಿ ದೇವರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಾ.ಹ ರಮಾಕುಮಾರಿ,ಸಿ.ಐ.ಟಿ.ಯುನ ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಕೊಳಗೇರಿ ಅಭಿವೃದ್ಧಿ ಮಂಡಳಿಯ ಹನುಮಂತರೆಡ್ಡಿ, ಗೌರವಾಧ್ಯಕ್ಷರಾದ ದೀಪಿಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News