ಬಂದೂಕು ತೋರಿಸಿ ದಂಪತಿಯ ಪರ್ಸ್, ಆಭರಣ ದೋಚಿದ ಕಳ್ಳರು: ಆಘಾತಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆ

Update: 2019-07-01 13:35 GMT
Photo: ANI

ಹೊಸದಿಲ್ಲಿ, ಜು.1: ತಮ್ಮ ಮನೆಗೆ ಹಿಂದಿರುಗುತ್ತಿದ್ದ ಕುಟುಂಬವೊಂದನ್ನು ಬಂದೂಕು ತೋರಿಸಿ ಬೆದರಿಸಿದ ಮೂವರು ಮುಸುಕುಧಾರಿಗಳು ಪರ್ಸ್, ಚಿನ್ನದ ಆಭರಣಗಳನ್ನು ದೋಚಿದ ಘಟನೆ ಉತ್ತರ ದಿಲ್ಲಿಯ ಮಾಡೆಲ್ ಟೌನ್‍ ನಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ವರುಣ್ ಬೆಹ್ಲ್, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಬೆಹ್ಲ್ ಪತ್ನಿಯ ಹೆತ್ತವರ ಮನೆಯಿಂದ ಮಾಡೆಲ್ ಟೌನ್‍ ನಲ್ಲಿರುವ ತಮ್ಮ ಮನೆಗೆ ಹಿಂದಿರುಗುವಾಗ ಸುಮಾರು 3 ಗಂಟೆಯಾಗಿತ್ತು. ಮನೆಯ ಹತ್ತಿರ ಅವರ ಕಾರು ಬರುತ್ತಿದ್ದಂತೆಯೇ ಗೇಟಿನ ಹೊರಗಡೆ ಮೂವರು ಮುಸುಕುಧಾರಿ ವ್ಯಕ್ತಿಗಳು ಮೋಟಾರ್ ಸೈಕಲ್ ನಲ್ಲಿದ್ದುದನ್ನು ಕಂಡರು. ಭಯಗೊಂಡ ವರುಣ್ ಕಾರನ್ನು ಸ್ವಲ್ಪ ಮುಂದಕ್ಕೆ ತೆಗೆದುಕೊಂಡು ಹೋದರೂ ನಂತರ ಮನಸ್ಸು ಬದಲಾಯಿಸಿ ಮನೆಯೆದುರು ಕಾರು ನಿಲ್ಲಿಸಿದ್ದರು. ಮುಂದಿನ ಘಟನಾವಳಿಗಳು ಕಾರು ಪಾರ್ಕಿಂಗ್ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ವರುಣ್ ಅವರು ಕಾರನ್ನು ನಿಲ್ಲಿಸಿ ಕಾರಿನಿಂದಿಳಿದು ಗೇಟ್ ಹಾಕಲು ಧಾವಿಸುತ್ತಿದ್ದಂತೆಯೇ ಆ ಮುಸುಕುಧಾರಿ ವ್ಯಕ್ತಿಗಳು  ಅವರತ್ತ ಬಂದೂಕು ನೆಟ್ಟು ಒಳ ನುಗ್ಗಿ ಬಿಟ್ಟಿದ್ದರು. “ಕಳ್ಳರು  ಪರ್ಸ್ ಹಾಗೂ ಬ್ರೇಸ್‍ಲೆಟ್ ಸೆಳೆದುಕೊಂಡರು'' ಎಂದು ವರುಣ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ವರುಣ್ ಅವರ ಪತ್ನಿ ಕಾರಿನ ಎದುರು ಭಾಗದಲ್ಲಿ ಕುಳಿತಿದ್ದರು. ಆಕೆ ತನ್ನ ಮೊಬೈಲ್ ಫೋನ್ ತೆಗೆದು ಎಸ್‍ಒಎಸ್ ಕರೆ ಮಾಡಲು ಪ್ರಯತ್ನಿಸುತ್ತಿದ್ದಂತೆಯೇ  ಒಬ್ಬ ಮುಸುಕುಧಾರಿ ಕಾರಿನಲ್ಲಿ ಬೆಲೆಬಾಳುವ ವಸ್ತುಗಳಿಗಾಗಿ  ಹುಡುಕಲಾರಂಭಿಸಿದ್ದ. ಆಕೆ ಕಾರಿನ ಸೀಟಿನ ಅಡಿಯಲ್ಲಿರಿಸಿದ್ದ ಪರ್ಸ್ ಅದೃಷ್ಟವಶಾತ್ ಕಳ್ಳರ ಕೈಗೆ ಸಿಗಲಿಲ್ಲ. ಕೊನೆಗೆ ಕಳ್ಳ ಆಕೆಯ ಕೈಯ್ಯಲ್ಲಿದ್ದ ಮೊಬೈಲ್ ಫೋನ್ ಸೆಳೆದುಕೊಂಡಿದ್ದ. ನಂತರ ಕಾರಿನತ್ತ ಹೋಗುವಂತೆ ವರುಣ್ ಗೆ ಹೇಳಿ ಕಳ್ಳರು ಅವರತ್ತ ಬಂದೂಕು ನೆಟ್ಟು ಅಲ್ಲಿಂದ ಕಾಲ್ಕಿತ್ತಿದ್ದರು.

ಘಟನೆ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ. ಈ ಘಟನೆಯ ಆರೋಪಿಗಳು ಈ ಹಿಂದೆಯೂ ಇದೇ ರೀತಿ ದಾಳಿ ನಡೆಸಿದ್ದಾರೆ ಹಾಗೂ ಒಮ್ಮೆ ಪೊಲೀಸರತ್ತ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News