ವನ್ಯ ಜೀವಿಗಳ ಹಾವಳಿ ತಡೆಗೆ ವೈಜ್ಞಾನಿಕ ಕ್ರಮ ಅನಿವಾರ್ಯ: ಸಚಿವ ಹೆಚ್.ಡಿ.ರೇವಣ್ಣ

Update: 2019-07-01 13:39 GMT

ಹಾಸನ, ಜು.1: ಜಿಲ್ಲೆಯಲ್ಲಿ ಆನೆ ಹಾವಳಿ ನಿಯಂತ್ರಣ ಕ್ರಮಗಳ ಕುರಿತು ಅಧ್ಯಯನ ನಡೆಸಲು ಶೀಘ್ರದಲ್ಲೇ ತಜ್ಞರ ತಂಡವನ್ನು ಶ್ರೀಲಂಕಾಗೆ ಕಳುಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಜಿಲ್ಲಾ ಮಟ್ಟದ ಆನೆ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಿದ ಸಚಿವರು, ವನ್ಯ ಜೀವಿಗಳ ಹಾವಳಿ ಶಾಶ್ವತ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಎಲ್ಲಾ ರೀತಿಯ ಅಧ್ಯಯನ, ಅಭಿಪ್ರಾಯ ಸಂಗ್ರಹ ಅಗತ್ಯ ಎಂದರು.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಹಲವು ವರ್ಷಗಳಿಂದ ಆನೆ ಹಾವಳಿ ಹಾಗೇ ಮುಂದುವರೆದಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಜಿಲ್ಲಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು, ಪರಿಸರವಾದಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಕ್ರೋಡೀಕೃತ ವ್ಯವಸ್ಥಿತ ಪ್ರಸ್ತಾವನೆಯನ್ನು ಸಿದ್ದಪಡಿಸಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಅಭಿಪ್ರಾಯ ಆಲಿಸಿದ ಸಚಿವರು, ಆನೆ ಹಾವಳಿ ತಡೆಗೆ ಹಾಗೂ ವೈಜ್ಞಾನಿಕ ರೀತಿಯ ಪರಿಹಾರ ಕ್ರಮಗಳಿಗೆ ಮುಂಬರುವ ವಿಧಾನಸಭಾ ಅಧಿವೇಶನಕ್ಕೆ ಮುನ್ನ ಅಥವಾ ನಂತರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇನ್ನೊಂದು ಸುತ್ತಿನ ಪ್ರಮುಖ ಸಭೆ ಕರೆದು ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಹೆಚ್.ಡಿ.ರೇವಣ್ಣ ಹೇಳಿದರು.

ಅರಣ್ಯ ಇಲಾಖೆಯಿಂದ ಈಗಾಗಲೇ ನೇಮಕ ಮಾಡಲ್ಪಟ್ಟಿರುವ 120 ಜನರ ತಂಡದ ಮೂಲಕ ಆನೆ ಓಡಿಸುವ, ಆನೆಗಳ ಓಡಾಟದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದರು. ಕ್ರಮ ಸ್ವಾಗಾತಾರ್ಹ, ಆದರೆ ಇದು ಇನ್ನಷ್ಟು ಪರಿಣಾಮಕಾರಿಯಾಗಬೇಕು ಎಂದು ಸಚಿವರು ಅಭಿಪ್ರಾಯ ಪಟ್ಟರು. ಸಕಲೇಶಪುರ ತಾಲೂಕಿನ ಆನೆ ಹಾವಳಿ ಪ್ರದೇಶಗಳಲ್ಲಿ ಅರಣ್ಯ ಕಾಲೇಜು ಪ್ರಾರಂಭಿಸುವ ಅಗತ್ಯವಿದೆ. ಅಲ್ಲದೇ, ಸ್ಥಳೀಯವಾಗಿ 2 ಮೊರಾರ್ಜಿ ವಸತಿ ಶಾಲೆ ಸ್ಥಾಪನೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಈಗ ಆನೆ ಹಾವಳಿ ಪ್ರದೇಶದಲ್ಲಿನ ಮಕ್ಕಳನ್ನು ಶಾಲೆಗೆ ಕಳುಹಿಸಲು ಅರಣ್ಯ ಇಲಾಖೆ ಮಾಡಿರುವ ಕ್ರಮ ಹಾಗೂ ಆನೆಗಳಿಗೆ ರೆಡಿಯೋ ಕಾಲರ್ ಅಳವಡಿಕೆ ಮೂಲಕ ಅವುಗಳ ಚಲನವಲನಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಹಂಚಿಕೆ ಪರಿಣಾಮಕಾರಿಯಾಗಬೇಕು ಎಂದ ಸಚಿವರು, ಹೆಲಿಕಾಪ್ಟರ್ ಮೂಲಕ ಬಿದಿರು, ಹಲಸು, ಬೈನೆ ಸೇರಿದಂತೆ  ಮತ್ತಿತರ ಗಜಪ್ರಿಯ ಆಹಾರ ಮರ, ಗಿಡ ಬೀಜ ಬಿತ್ತನೆಗೂ ಪ್ರಯತ್ನ ನಡೆಸೋಣ ಎಂದು ಭರಸವೆ ನೀಡಿದರು.

ಬುರಡಾಳು ಬೋರೆ ಸೇರಿದಂತೆ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದಲ್ಲಿರುವ ಪರಿಸರಕ್ಕೆ ಮಾರಕವಾದ ಸಸಿಗಳನ್ನು ತೆಗೆದು ವನಸ್ನೇಹಿ ಗಿಡಗಳನ್ನು ಮಾತ್ರ ನೆಡಬೇಕು. ಅರಣ್ಯ ಅಭಿವೃದ್ದಿ ಯೋಜನೆಗಳನ್ನೂ ವ್ಯವಸ್ಥಿತವಾಗಿ ರೂಪಿಸಿ ಜಾರಿಗೊಳಿಸಬೇಕು. ಅರಣ್ಯ ವ್ಯಾಪ್ತಿಯಲ್ಲಿ ಕೆರೆ ಕಟ್ಟೆಗಳನ್ನು ಅಭಿವೃದ್ದಿ ಪಡಿಸಬೇಕು. ಇದಕ್ಕೆ 10 ಕೋಟಿ ರೂಪಾಯಿ ಅನುದಾನವನ್ನು ಅರಣ್ಯ ಇಲಾಖೆಗೆ ನಬಾರ್ಡ್ ಯೋಜನೆಗಳಲ್ಲಿ ತಾವು ಒದಗಿಸುವುದಾಗಿ ಸಚಿವರು ಹೇಳಿದರು.

ಆಲೂರು- ಸಕಲೇಶಪುರ ಕ್ಷೇತ್ರದ ಶಾಸಕರಾದ ಹೆಚ್.ಕೆ.ಕುಮಾರಸ್ವಾಮಿ ಅವರು, ಜಿಲ್ಲೆಯ ಮಲೆನಾಡು ಭಾಗಕ್ಕೆ ಪ್ರತ್ಯೇಕ ವನ್ಯಜೀವಿ ಉಪವಿಭಾಗ ಅಗತ್ಯವಿದೆ. ಅರಣ್ಯ ಕಾಲೇಜು ಸ್ಥಾಪನೆ ಕೂಡ ಬೇಕಾಗಿದೆ ಎಂದು ಸಭೆಯ ಗಮನ ಸೆಳೆದರು. ಆನೆ ಹಾಗೂ ವನ್ಯ ಜೀವಿಗಳ ಹಾವಳಿಯಿಂದ ಆಗುವ ನಷ್ಟಕ್ಕೆ ಸರಿಯಾದ ಪರಿಹಾರ, ಸಕಾಲದಲ್ಲಿ ವಿತರಣೆಯಾಗಬೇಕು. ಶೇ.50:50 ರ ಅನುಪಾತದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇದನ್ನು ಹಂಚಿಕೊಳ್ಳಬೇಕು ಎಂದು ಶಾಸಕರು ಹೇಳಿದರು. ಆನೆ ಕಾರಿಡಾರ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲು ನಿಯೋಗ ಕರೆದೊಯ್ಯುವಂತೆ ಅವರು ಒತ್ತಾಯಿಸಿದರು.

ಸಭೆಯಲ್ಲಿ ಹಾಜರಿದ್ದ ಆರ್.ಪಿ.ವೆಂಕಟೇಶ್ ಮೂರ್ತಿ, ಅತ್ತಿಹಳ್ಳಿ ದೇವರಾಜ್, ಕಿಶೋರ್ ಕುಮಾರ್, ಜಿ.ಆರ್.ಕೆಂಚೇಗೌಡ, ಬೆಳೆಗಾರರ ಒಕ್ಕೂಟದ ತೀರ್ಥ ಮಲ್ಲೇಶ್, ತೋಚ ಅನಂತ ಸುಬ್ಬರಾವ್ ಮತ್ತಿತರರು ಆನೆ ಹಾವಳಿ ಹಾಗೂ ಪರಿಹಾರ ಕ್ರಮಗಳ ಕುರಿತು ಸಭೆಯಲ್ಲಿ ವಿವರಿಸಿದರು.

ಸಕಲೇಶಪುರ, ಆಲೂರು ತಾಲುಕು ವ್ಯಾಪ್ತಿಯಲ್ಲಿ ವ್ಯವಸ್ಥಿತ ಆನೆ ಕಾರಿಡಾರ್ ಸ್ಥಾಪನೆ, ನಾಗಾವರದಲ್ಲಿ ಆನೆ ಧಾಮ ಸ್ಥಾಪನೆ, ಕರಡಿಬೆಟ್ಟ ಸೇರಿದಂತೆ ಅರಣ್ಯ ಭಾಗದಲ್ಲಿ ಆನೆಗಳಿಗೆ ಆಹಾರ ಪ್ರಮಾಣ ಹೆಚ್ಚಾಗಿ ಲಭ್ಯವಾಗುವಂತೆ ಮಾಡುವುದು. ಶ್ರೀಲಂಕಾ ಮಾದರಿಯಲ್ಲಿ ರೈಲ್ವೆ ಕಂಬಿಗಳನ್ನು ಬಳಸಿ ತಡೆಗೋಡೆ ನಿರ್ಮಾಣ, ಅರಣ್ಯ ವ್ಯಾಪ್ತಿಯಲ್ಲಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ತಡೆ ನೀಡುವುದು. ಪರಿಹಾರ ಮೊತ್ತವನ್ನು ಹೆಚ್ಚಿಸುವುದು. ಆನೆ ಮತ್ತು ಕಾಡು ಪ್ರಾಣಿಗಳ ದಾಳಿಗಳ ನಿಯಂತ್ರಣಕ್ಕೆ ವ್ಯವಸ್ಥಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಮಾತನಾಡಿ, ಗ್ರಾಮೀಣಾಭಿವೃದ್ದಿ ಇಲಾಖೆ ವತಿಯಿಂದ ಉದ್ಯೋಗ ಖಾತರಿ ಯೋಜನೆಯಡಿ ಅರಣ್ಯ ವ್ಯಾಪ್ತಿಯಲ್ಲಿ ಕೆರೆಕಟ್ಟೆಗಳ ನಿರ್ಮಾಣ, ಕಿಂಡಿ ಅಣೆಕಟ್ಟೆಗಳ ನಿರ್ಮಾಣ ಕಾರ್ಯವನ್ನು ಮಾಡಲು ಮುಂದಾದರೆ ಅರಣ್ಯ ಇಲಾಖೆ ಅದಕ್ಕೆ ಅನುಮತಿ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಗೊಂದಲಗಳು ಪರಿಹಾರವಾಗಬೇಕು. ಅರಣ್ಯ ಪ್ರದೇಶಗಳಲ್ಲಿ ನೀರಿನ ಸಂಗ್ರಹಕ್ಕೆ ಕ್ರಮಗಳಾಗಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇಲಾಖೆಗಳ ನಡುವಿನ ಗೊಂದಲಗಳನ್ನು ತಕ್ಷಣ ಬಗೆಹರಿಸಿಕೊಂಡು ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ಕಡೆಗಳ ಕಿಂಡಿ ಅಣೆಕಟ್ಟೆಗಳನ್ನು ನಿರ್ಮಿಸಿ ವನ್ಯ ಜೀವಿಗಳಿಗೆ ಕುಡಿಯಲು ನೀರು ಪೂರೈಸಿ ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು ಅವರು ಈವರೆಗೆ ತೆಗೆದು ಕೊಂಡಿರುವ ತಾತ್ಕಾಲಿಕ ಹಾಗೂ ಶಾಶ್ವತ ಕ್ರಮಗಳನ್ನು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ವಿವರಿಸಿದರು.

ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ಉಪವಿಭಾಗಾಧಿಕಾರಿ ಡಾ.ಎಚ್.ಎಲ್ ನಾಗರಾಜ್, ಕವಿತಾ ರಾಜಾರಾಂ, ತಹಶೀಲ್ದಾರರು, ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News