ಸಮ್ಮಿಶ್ರ ಸರಕಾರದ ಅಂತ್ಯಕಾಲ ಬಂದಿದೆ: ಆರ್.ಅಶೋಕ್

Update: 2019-07-01 14:29 GMT

ಮಂಡ್ಯ, ಜು.1: ಆನಂದ್ ಸಿಂಗ್ ಮಾತ್ರವಲ್ಲ ಅವರ ಜತೆ ಬಹಳ ಜನ ಇರಬಹುದು. ಆ ಮೂಲಕ ರಾಜ್ಯ ಸಮ್ಮಿಶ್ರ ಸರಕಾರದ ಅಂತ್ಯಕಾಲ ಬಂದಿದೆ ಅನಿಸುತ್ತದೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿದ್ದಾರೆ. 

ಸೋಮವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ಮಾಡಲು ಹೋಗುವುದಿಲ್ಲ. ಸರಕಾರ ತಾನಾಗಿಯೇ ಪತನವಾದರೆ ನಾವು ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ ಎಂದರು.

ಸರಕಾರ ಪತನದ ಕಡೆ ಹೋಗುತ್ತಿದೆ. ದಿನೇ ದಿನೇ ಗುಂಪುಗಾರಿಕೆ ಜಾಸ್ತಿ ಆಗುತ್ತಿದೆ. ಸಿಎಂ ನಡೆ, ಆಡಳಿತದ ಬಗ್ಗೆ ಕಾಂಗ್ರೆಸ್‍ನಲ್ಲಿ ಅಸಹಕಾರ, ಅಸಹನೆ ಭುಗಿಲೆದ್ದಿದೆ. ಜೆಡಿಎಸ್ ಎಂಎಲ್‍ಎಗಳಿಗೆ ಒಂದು, ಕಾಂಗ್ರೆಸ್ಸಿನ ಶಾಸಕರಿಗೆ ಒಂದು ರೀತಿ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಶಾಸಕರು ದಂಗೆ ಎದ್ದಿದ್ದಾರೆ ಎಂದು ಅವರು ಟೀಕಿಸಿದರು.

ಉಮೇಶ್ ಜಾದವ್ ರಾಜೀನಾಮೆ ನೀಡಿ, ಬಿಜೆಪಿಯಿಂದ ಲೋಕಸಭಾ ಸದಸ್ಯರಾಗಿದ್ದಾರೆ. ರಮೇಶ್ ಜಾರಕಿಹೋಳಿ ನಂತರ ಸರತಿ ಸಾಲಿನಂತೆ ಹಲವರು ರಾಜೀನಾಮೆ ನೀಡಲಿದ್ದಾರೆ. ಜೆಡಿಎಸ್‍ನವರು ರಾಜೀನಾಮೆ ನೀಡಬಹುದು. ಅವರ ಪಕ್ಷದಲ್ಲೂ ಭಿನ್ನಮತವಿದೆ. ಜೆಡಿಎಸ್‍ನ ಹಲವು ಶಾಸಕರು ತಿರುಗಿಬಿದ್ದಿದ್ದಾರೆ ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆಯಾಗಿ ಸಿಎಂ ಪುತ್ರ ಸೋತರೆ, ಸಿಎಂ ಸೋತಂತೆ. ಅವರು ರಾಜೀನಾಮೆ ನೀಡಬೇಕಾಗಿತ್ತು. ಆದರೆ, ಅಧಿಕಾರಕ್ಕೋಸ್ಕರ ಕುರ್ಚಿಗೆ ಅಂಟಿ ಕುಳಿತಿದ್ದಾರೆ. ಈ ಸರಕಾರ ಬೇಕಿರೋದು ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್ ಅವರಿಗೆ ಮಾತ್ರ. ಇನ್ನಾರಿಗೂ ಬೇಕಿಲ್ಲ ಎಂದು ಅವರು ಆರೋಪಿಸಿದರು.

ಸಿದ್ದರಾಮಯ್ಯನವರು ಈ ಸರಕಾರ ತೊಲಗಿದರೆ ಸಾಕು ಅಂತ ದಿನ ಒಂದೊಂದು ಬಾಂಬ್ ಸಿಡಿಸುತ್ತಿದ್ದಾರೆ. ಮೊನ್ನೆ ದೇವೇಗೌಡರು ಈ ಸರಕಾರ ಇನ್ನೆಷ್ಟು ದಿನ ಇರುತ್ತೋ, ಮಧ್ಯಂತರ ಚುನಾವಣೆ ಆಗಬಹುದು ಎಂದಿದ್ದಾರೆ. ಕಾಂಗ್ರೆಸ್ಸಿನವರಿಗೆ ಜೆಡಿಎಸ್ ಮೇಲೆ ನಂಬಿಕೆಯಿಲ್ಲ. ಜೆಡಿಎಸ್‍ನವರಿಗೆ ಕಾಂಗ್ರೆಸ್ ಮೇಲೆ ನಂಬಿಕೆಯಿಲ್ಲ. ಆದ್ದರಿಂದ ರಾಜೀನಾಮೆ ಪರ್ವ ಆರಂಭವಾಗಿದೆ ಎಂದು ಅವರು ಪ್ರತಿಕ್ರಿಯಸಿದರು.

ಮಧ್ಯಂತರ ಚುನಾವಣೆ ಅಗತ್ಯವಿಲ್ಲ:
ಜೆಡಿಎಸ್‍ನವರು 37 ಶಾಸಕರನ್ನು ಇಟ್ಟುಕೊಂಟು ಅಧಿಕಾರ ಮಾಡುತ್ತಿರುವುದು ದುರ್ದೈವ. 105 ಶಾಸಕರಿರುವ ನಮಗೆ ನೈತಿಕ ಅಧಿಕಾರವಿದೆ. ಮಧ್ಯಂತರ ಚುನಾವಣೆ ಅಗತ್ಯವಿಲ್ಲ. ನಾವು ಸರಕಾರ ರಚನೆ ಮಾಡುತ್ತೇವೆ. ಆ ಪರಿಸ್ಥಿತಿ ನಿರ್ಮಾಣವಾದರೆ ನಮ್ಮ ಪಕ್ಷದವರು ಸಭೆ ಸೇರಿ ತೀರ್ಮಾನ ಮಾಡುತ್ತೇವೆ. ನಮ್ಮ ಪಕ್ಷ, ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅಶೋಕ್ ತಿಳಿಸಿದರು. 

ಸತೀಶ್ ಜಾರಕಿಹೋಳಿ ಅವರ ಅಣ್ಣನನ್ನೇ ಕೈಯಲ್ಲಿ ಇಟ್ಟುಕೊಂಡಿಲ್ಲ. ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಮೊದಲು ಅದನ್ನು ಸರಿಮಾಡಿಕೊಂಡು ನಂತರ ರಿವರ್ಸ್ ಆಪರೇಷನ್ ಮಾಡಲಿ. ನಾವು ಯಾರನ್ನು ಭೇಟಿ ಮಾಡಲ್ಲ. ಸರಕಾರ ಬಿದ್ದರೆ ರಚನೆಗೆ ಮುಂದಾಗುತ್ತೇವೆ. ಆಪರೇಷನ್ ಮೇಲೆ ನಮಗೆ ನಂಬಿಕೆಯಿಲ್ಲ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.

ರಾಜೀನಾಮೆ ನೀಡುವವರ ಪಟ್ಟಿ ದೊಡ್ಡದಿದೆ. ಯಾವ್ಯಾವ ಶಾಸಕರು, ಯಾರ ಜತೆಯಲ್ಲಿದ್ದಾರೆ ಎಂಬುದು ಒಂದು ವಾರದಲ್ಲಿ ಗೊತ್ತಾಗಲಿದೆ.  ಕಾದು ನೋಡಿ, ಪರದೆ ಮೇಲೆ ಎಲ್ಲವು ಬರಲಿದೆ. ನಾವು ಯಾರ ಸಂಪರ್ಕದಲ್ಲೂ ಇಲ್ಲ. ಇದು ಅವರ ಆಂತರಿಕ ಜಗಳ. ಸರಕಾರದ ವಿರುದ್ಧ ಅಸಮಾಧಾನ ಎಂದರು.

ಈ ಸರಕಾರ ತೊಲಗಬೇಕು ಎಂಬುದು ಕರ್ನಾಟಕದ 6.5 ಕೋಟಿ ಜನರ ಬಯಕೆ. ಬಂಢಾರ ಬಾಕ್ಸ್ ಓಪನ್ ಆಗಿದೆ. ಸರ್ಪೈಸ್ ಹೆಸರುಗಳು ಬರಬಹುದು. ನೀವು ಊಹೆ ಮಾಡದ ಹೆಸರುಗಳು ಬರಬಹುದು. ನಾಳೆ ಮತ್ತಷ್ಟು ಅಚ್ಚರಿ ಸಿಗಲಿದೆ. ನಾಳೆ ಸರಕಾರಕ್ಕೆ ಗ್ರಹಣವಿದೆ. ಆಷಾಡದಲ್ಲಿ ಬಿಜೆಪಿ ಸರಕಾರ ರಚನೆಯಾಗಬೇಕೆಂಬ ನಮ್ಮ ಆಸೆಯಿದೆ. ಆಗುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಬೆಳೆಗಳಿಗೆ ನೀರು ಬಿಡುಗಡೆ ಹೋರಾಟಕ್ಕೆ ಬಿಜೆಪಿ ಬೆಂಬಲವಿದೆ. ಸಂಸದೆ ಸುಮಲತಾ ಅವರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಅವರು ಗೆದ್ದ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿರುವುದು ಮಹಿಳೆಗೆ ಮಾಡಿದ ಅವಮಾನವಾಗಿದೆ ಎಂದು ಅವರು ಕಿಡಿಕಾರಿದರು.

ಜಿ.ಪಂ ಸದಸ್ಯ ಚಂದಗಾಲು ಶಿವಣ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಡಾ.ಸಿದ್ದರಾಮಯ್ಯ, ಅಶೋಕ್ ಕುಮಾರ್, ಸಾಯಿ ರವೀಂದ್ರ, ಸಿ.ಟಿ.ಮಂಜುನಾಥ್, ನಾಗಣ್ಣ ಮಲ್ಲಪ್ಪ ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News