ಅಮೆರಿಕದ ಪತ್ರಕರ್ತರು, ಉ. ಕೊರಿಯ ಭದ್ರತಾ ಸಿಬ್ಬಂದಿ ನಡುವೆ ತಳ್ಳಾಟ

Update: 2019-07-01 16:35 GMT

ವಾಶಿಂಗ್ಟನ್, ಜು. 1: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವಿನ ಭೇಟಿಯನ್ನು ವರದಿ ಮಾಡಲು ಬಂದಿದ್ದ ಅಮೆರಿಕದ ಪತ್ರಕರ್ತರು ಮತ್ತು ಉತ್ತರ ಕೊರಿಯದ ಭದ್ರತಾ ಸಿಬ್ಬಂದಿ ನಡುವೆ ರವಿವಾರ ನಡೆದ ಹೊಯ್‌ಕೈಯಲ್ಲಿ ಶ್ವೇತಭವನದ ನೂತನ ಪತ್ರಿಕಾ ಕಾರ್ಯದರ್ಶಿ ಸ್ಟೀಫನೀ ಗ್ರಿಶಮ್‌ಗೆ ತರಚು ಗಾಯಗಳಾಗಿವೆ ಎಂದು ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟ್ರಂಪ್ ಮತ್ತು ಕಿಮ್ ನಡುವೆ ಸಭೆ ನಡೆಯುತ್ತಿದ್ದ ‘ಇಂಟರ್ ಕೊರಿಯನ್ ಹೌಸ್ ಆಫ್ ಫ್ರೀಡಂ’ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಅಮೆರಿಕದ ಪತ್ರಕರ್ತರನ್ನು ಉತ್ತರ ಕೊರಿಯದ ಭದ್ರತಾ ಸಿಬ್ಬಂದಿ ಹೊರದಬ್ಬುತ್ತಿದ್ದರು.

ಆಗ, ಅಮೆರಿಕದ ಪತ್ರಕರ್ತರಿಗೆ ಸಹಾಯ ಮಾಡಲು ಗ್ರಿಶಮ್ ಮಧ್ಯಪ್ರವೇಶಿಸಿದರು ಎಂಬುದಾಗಿ ಪತ್ರಕರ್ತರು ಟ್ವೀಟ್ ಮಾಡಿದ್ದಾರೆ.

ಕ್ಯಾಮರದ ಎದುರು ನಿಂತಿದ್ದ ವ್ಯಕ್ತಿಯೊಬ್ಬನನ್ನು ದೂಡಿದ ಗ್ರಿಶಮ್, ‘‘ಒಳಗೆ ಹೋಗಿ, ಹೋಗಿ’’ ಎಂಬುದಾಗಿ ಅಮೆರಿಕದ ಪತ್ರಕರ್ತರಿಗೆ ಹೇಳುವುದು ವೀಡಿಯೊ ತುಣುಕೊಂದರಲ್ಲಿ ಕೇಳುತ್ತದೆ.

ಘರ್ಷಣೆಯ ಮೊದಲು, ಪತ್ರಕರ್ತರನ್ನು ಒಳಗೆ ಬಿಡಲಾಗುವುದಿಲ್ಲ ಎಂಬುದಾಗಿ ಕಟ್ಟಡದ ಹೊರಗಿದ್ದ ಪತ್ರಕರ್ತರಿಗೆ ಹೇಳಲಾಗಿತ್ತು. ಆದರೆ, ಪತ್ರಕರ್ತರನ್ನು ಒಳಗೆ ಬಿಡಲಾಗುವುದು ಎಂಬುದಾಗಿ ಅಮೆರಿಕದ ಅಧಿಕಾರಿಯೊಬ್ಬರು ಬಳಿಕ ಹೇಳಿದರು.

 ‘ಅತ್ಯುತ್ಸಾಹ’ದಿಂದಿದ್ದ ಉತ್ತರ ಕೊರಿಯದ ಭದ್ರತಾ ಸಿಬ್ಬಂದಿ ಹಲವು ಸಂದರ್ಭಗಳಲ್ಲಿ ಅಮೆರಿಕದ ಪತ್ರಕರ್ತರಿಗೆ ಅಡ್ಡ ಬರುತ್ತಿದ್ದರು ಎಂಬುದಾಗಿ ‘ಬ್ಲೂಮ್‌ಬರ್ಗ್’ ವರದಿಗಾರ್ತಿ ಜೆನಿಫರ್ ಜಾಕೋಬ್ಸ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News