ಅತೃಪ್ತ ಶಾಸಕರ ಪಟ್ಟಿಯಲ್ಲಿ ಹೆಸರು: ಶಾಸಕ ಭೀಮಾನಾಯ್ಕ್ ಪ್ರತಿಕ್ರಿಯಿಸಿದ್ದು ಹೀಗೆ..

Update: 2019-07-01 17:05 GMT

ಬೆಂಗಳೂರು, ಜು.1: ನಾವು ಕಾಂಗ್ರೆಸ್ ಪಕ್ಷದಲ್ಲಿಯೇ ಮುಂದುವರೆಯುತ್ತೇವೆ. ಈಗಾಗಲೇ ಹಲವಾರು ಬಾರಿ ಸ್ಪಷ್ಟೀಕರಣ ನೀಡಿದ್ದರೂ ಮಾಧ್ಯಮಗಳ ಅತೃಪ್ತ ಶಾಸಕರ ಪಟ್ಟಿಯಲ್ಲಿ ಪದೇ ಪದೇ ನಮ್ಮ ಹೆಸರು ಪ್ರಸ್ತಾಪವಾಗುತ್ತಿದೆ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ತಿಳಿಸಿದರು. 

ಸೋಮವಾರ ನಗರದ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಾಸಕರಾದ ಪ್ರತಾಪ್‌ಗೌಡ ಪಾಟೀಲ್ ಹಾಗೂ ಅಮರೇಗೌಡ ಬಯ್ಯೆಪುರ ಅವರೊಂದಿಗೆ ಆಗಮಿಸಿದ ಅವರು, ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಶಾಸಕ ಸ್ಥಾನಕ್ಕೆ ಆನಂದ್‌ಸಿಂಗ್ ರಾಜೀನಾಮೆ ನೀಡಿರುವ ವಿಚಾರದ ಕುರಿತು ಬೆಳಗ್ಗೆ ಸುದ್ದಿವಾಹಿನಿಗಳ ವರದಿಗಾರರಿಗೆ ನಾನು ಸ್ಪಷ್ಟಣೆ ನೀಡಿದ್ದೇನೆ. ಆದರೂ, ಆಪರೇಷನ್ ಕಮಲಕ್ಕೆ ಬಲಿಯಾಗಲಿರುವ ಶಾಸಕರು, ಅತೃಪ್ತ ಶಾಸಕರು ಎಂದು ಮಾಧ್ಯಮಗಳು ಸಿದ್ಧಪಡಿಸಿಕೊಂಡಿರುವ ಪಟ್ಟಿಯಲ್ಲಿ ನನ್ನ ಹೆಸರು ಪ್ರಸ್ತಾಪವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮಾಧ್ಯಮಗಳಲ್ಲಿ ಈ ರೀತಿ ನಮ್ಮ ಹೆಸರು ಪ್ರಸ್ತಾಪವಾಗುವುದರಿಂದ ಕ್ಷೇತ್ರದ ಜನರು ನಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ. ನಮಗೂ ಮಾನ, ಮರ್ಯಾದೆ ಇದೆ. ದಯವಿಟ್ಟು ಇನ್ನು ಮುಂದೆ ನಮ್ಮ ಹೆಸರುಗಳನ್ನು ಆ ಪಟ್ಟಿಯಿಂದ ಕೈಬಿಡಿ. ಆನಂದ್ ಸಿಂಗ್ ಮನವೊಲಿಸುವ ಪ್ರಯತ್ನವನ್ನು ಬಳ್ಳಾರಿ ಜಿಲ್ಲೆಯ ನಮ್ಮ ಎಲ್ಲ ಶಾಸಕರು ಮಾಡುತ್ತೇವೆ ಎಂದು ಭೀಮಾನಾಯ್ಕ್ ಹೇಳಿದರು.

ಶಾಸಕ ಅಮರೇಗೌಡ ಬಯ್ಯಪುರ ಮಾತನಾಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅವರವರ ಹಕ್ಕು. ರಾಜೀನಾಮೆ ನೀಡಿದ ಬಳಿಕ ಅವರು ಎಲ್ಲಿಗೆ ಹೋಗುತ್ತಾರೆ ಅನ್ನೋದು ಅವರ ವೈಯಕ್ತಿಕ ಆಯ್ಕೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಅನ್ನೋದು ಸುಳ್ಳು ಎಂದರು.

ಆನಂದ್‌ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ತಮ್ಮ ವೈಯಕ್ತಿಕ ಕಾರಣಗಳಿಗೆ ರಾಜೀನಾಮೆ ನೀಡಿದ್ದಾರೆ. ನಮಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟು, ಕ್ಷೇತ್ರದಲ್ಲಿ ಗೆಲ್ಲಿಸಿಕೊಂಡು ಬಂದಿದೆ. ಯಾವುದೇ ಅತೃಪ್ತ ಶಾಸಕರ ಗುಂಪಿನಲ್ಲಿ ನಾವಿಲ್ಲ. ನಮಗೂ ಮಾನ, ಮರ್ಯಾದೆ ಇದೆ, ಪಕ್ಷವನ್ನು ಬಿಡುವ ಯಾವ ಆಲೋಚನೆಯೂ ನಮ್ಮ ಮನಸ್ಸಿನಲ್ಲಿ ಇಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News