ಮಣಿಪಾಲ್ ವಂಚನೆ ಪ್ರಕರಣ: ಆರೋಪಿ ಬಾಲಂಬಲ್‌ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

Update: 2019-07-01 17:30 GMT

ಬೆಂಗಳೂರು, ಜು.1: ಎಪ್ಪತ್ತು ಕೋಟಿ ರೂ.ಗಳ ಮಣಿಪಾಲ್ ವಂಚನೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಚೆನ್ನೈ ಮೂಲದ ಮಹಿಳೆ ಬಾಲಂಬಲ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ. 

ಈ ವಂಚನೆ ಪ್ರಕರಣದಲ್ಲಿ ಈ ಮಹಿಳೆ ಏಳನೆ ಆರೋಪಿಯಾಗಿದ್ದಾರೆ. ಇದಲ್ಲದೇ, ಮುಖ್ಯ ಆರೋಪಿಯಾಗಿರುವ ಸಂದೀಪ್ ಗುರುರಾಜ್ ಮತ್ತು ಆತನ ಅಳಿಯ ಕಾರ್ತಿಕ್ ಪಾಂಡುರಂಗಿ ಅವರ ವಿರುದ್ಧ ವಿಚಾರಣೆಗೆ ಆದೇಶ ಹೊರಡಿಸಿದೆ. ಕಾರ್ತಿಕ್ ಪಾಂಡುರಂಗಿ ದುಬೈನಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂದು ಮಣಿಪಾಲ್ ಪರ ವಕೀಲರು ಪೀಠಕ್ಕೆ ತಿಳಿಸಿದರು.

ಮಣಿಪಾಲ್‌ನ ಅಕೌಂಟ್‌ಗಳಲ್ಲಿದ್ದ 2.54 ಕೋಟಿ ರೂ.ಗಳನ್ನು ಪ್ರಮುಖ ಆರೋಪಿಯಾಗಿರುವ ಬೆಂಗಳೂರು ಮೂಲದ ಮಣಿಪಾಲ್ ಗ್ರೂಪಿನ ಹಣಕಾಸು ವಿಭಾಗದ ಮಾಜಿ ಮುಖ್ಯಸ್ಥ ಗುರುರಾಜ್ ನೆರವಿನಿಂದ ವರ್ಗಾವಣೆ ಮಾಡಿಸಿಕೊಂಡಿದ್ದರು ಎಂಬ ಆರೋಪ ಬಲಾಂಬಲ್ ಮೇಲಿದೆ. ಗುರುರಾಜ್ ತನ್ನ ಪತ್ನಿ ಚರುಸ್ಮಿತಾ ಮತ್ತು ತನ್ನ ಸಹಪಾಠಿಗಳಾದ ಅಮೃತಾ ಚೆಂಗಪ್ಪ ಮತ್ತು ಅಮೃತಾರ ತಾಯಿ ಮೀರಾ ಅವರೊಂದಿಗೆ ಸೇರಿ ಕುತಂತ್ರ ನಡೆಸಿ ಈ ಕೃತ್ಯ ನಡೆಸಿದ್ದರು.

ಡಿ.23ರಂದು ಮೊದಲ ಆರೋಪಿ ಗುರುರಾಜ್ ಮತ್ತು 2ನೆ ಆರೋಪಿ ಆತನ ಪತ್ನಿಯನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ಇವರಿಬ್ಬರು ಚೆನ್ನೈನ ರೆಸಾರ್ಟ್‌ವೊಂದರಲ್ಲಿ ಬಾಲಂಬಲ್ ಮತ್ತು ಆಕೆಯ ಪತಿಯನ್ನು ಭೇಟಿಯಾಗಿದ್ದರು. ಅವರು ಅಧಿಕಾರಸ್ಥರೊಂದಿಗೆ ಉತ್ತಮ ಸಂಪರ್ಕ ಇಟ್ಟುಕೊಂಡವರಾಗಿದ್ದು, ತಮಿಳುನಾಡಿನ ಕೆಲವು ಅಧಿಕಾರಿಗಳಿಂದ ಸ್ಥಳೀಯ ಪೊಲೀಸರ ಮೇಲೆ ಒತ್ತಡ ತಂದು ಆಕೆಯ ಬಂಧನವನ್ನು ತಪ್ಪಿಸಲು ಪ್ರಯತ್ನಪಟ್ಟಿದ್ದರು ಎಂದು ವಕೀಲರು ವಾದಿಸಿದರು. ಬಾಲಂಬಲ್ ಎಂಬಿಎ ಪದವೀಧರಳಾಗಿದ್ದು, ಗುರುರಾಜ್ ಮತ್ತಿಬ್ಬರು ಆರೋಪಿಗಳ ಜತೆ ಸೇರಿ ನ್ಯಾಚುರಲ್ ಗ್ಯಾಸ್‌ನಲ್ಲಿ ಟ್ರೇಡಿಂಗ್ ವ್ಯವಹಾರ ನಡೆಸುತ್ತಿದ್ದಳು. ಮಾರುಕಟ್ಟೆಯಲ್ಲಿ ಈಕೆ 2.54 ಕೋಟಿ ರೂ.ಹೂಡಿಕೆ ಮಾಡಿದ್ದಳು ಮತ್ತು ಈ ಚಟುವಟಿಕೆಗಳಿಂದ ಆಕೆ 13 ಲಕ್ಷ ರೂ. ಲಾಭವನ್ನೂ ಗಳಿಸಿದ್ದಳು.

ಈ ಹಿಂದೆ ಬಾಲಂಬಲ್ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ್ದ ನ್ಯಾಯಾಲಯ ಆಕೆಗೆ ನಾಲ್ಕು ವಾರಗಳ ಕಾಲ ಅಂತರರಾಜ್ಯ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿತ್ತು. 2.54 ಕೋಟಿ ರೂಪಾಯಿಗೂ ಅಧಿಕ ಹಣ ಕಕ್ಷಿದಾರನ ಕೊಟಕ್ ಸೆಕ್ಯೂರಿಟಿಸ್ ಅಕೌಂಟಿನಲ್ಲಿ ಇದ್ದದ್ದು ತನಿಖೆಯಿಂದ ತಿಳಿಯಿತು.

ಈ ತನಿಖಾ ವರದಿಯನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿ, ಬಾಲಂಬಲ್ ತಮಿಳುನಾಡಿನ ನಿವಾಸಿಯಲ್ಲ. ಆಕೆಗೆ ಜಾಮೀನು ನೀಡಿದರೆ ತನಿಖೆಗೆ ಸಹಕಾರ ನೀಡುವುದಿಲ್ಲ. ಇದಲ್ಲದೇ, ಒಂದು ವೇಳೆ ಆಕೆಗೆ ಜಾಮೀನು ನೀಡಿದರೆ ತಲೆ ಮರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸರು ಪೀಠಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News