ಪ್ರಜಾಪ್ರಭುತ್ವದ ಉಳಿವಿಗೆ ಪತ್ರಕರ್ತರ ಪಾತ್ರ ದೊಡ್ಡದು: ಸಚಿವ ಪ್ರಿಯಾಂಕ್ ಖರ್ಗೆ

Update: 2019-07-01 17:32 GMT

ಬೆಂಗಳೂರು, ಜು.1: ಪ್ರಜಾಪ್ರಭುತ್ವದ ಉಳಿವು ಹಾಗೂ ಬೆಳವಣಿಗೆಗೆ ನಾಲ್ಕನೆಯ ಅಂಗ ಎಂದು ಕರೆಸಿಕೊಳ್ಳುವ ಪತ್ರಿಕಾರಂಗದ ಪ್ರಾಮುಖ್ಯತೆಯಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಅಭಿಪ್ರಾಯಪಟ್ಟರು.

ಸೋಮವಾರ ನಗರದಲ್ಲಿ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದ ಅಭಿವೃದ್ಧಿಗೆ ಪೂರಕವಾದ ಸುದ್ದಿಗಳನ್ನು ಸರಳೀಕರಣಗೊಳಿಸಿ ಜನರಿಗೆ ತಲುಪಿಸುವಲ್ಲಿ ಗಮನ ನೀಡುವ ಅವಶ್ಯಕತೆಯಿದೆ ಎಂದು ಹೇಳಿದರು.

ಮಾಧ್ಯಮಗಳ ವರದಿಗಳು ಸರಕಾರದ ಮೇಲೆ ನೇರ ಪರಿಣಾಮ ಬೀರುತ್ತವೆ. ಹಾಗಾಗಿ ಪತ್ರಿಕೆಗಳಿಗೆ ಒದಗಿಸಲಾಗಿರುವ ಮುಕ್ತ ಸ್ವಾತಂತ್ರವನ್ನು ಸದ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗೆ ಕೈಜೋಡಿಸಬೇಕು. ಅಲ್ಲದೆ ಕನ್ನಡದ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಂಗಳೂರ ಸಮಾಚಾರ ಪತ್ರಿಕೆ ಪ್ರಾರಂಭ ಹಾಗೂ ಜನರಿಗೆ ತಲುಪಿದ್ದ ರೀತಿ ಅನನ್ಯವಾದುದು. ಅಂದಿನಿಂದ ಇಂದಿನವರೆಗೆ ಪತ್ರಿಕೆಗಳು ಬೃಹದಾಕಾರವಾಗಿ ಬೆಳೆದು ಬಂದಿವೆ. ಈ ಬೆಳವಣಿಗೆಗೆ ಆಯಾ ಕಾಲಕ್ಕೆ ಪತ್ರಕರ್ತರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಪತ್ರಕರ್ತರ ಬೇಡಿಕೆಗಳಿಗೆ ಸ್ಪಂದಿಸಿದ ಸಚಿವರು ಪತ್ರಕರ್ತರಿಗೆ ನಿವೇಶನ ಒದಗಿಸಲು ಸಿಂದಗಿ (ಬಿ) ಗ್ರಾಮದ ಬಳಿ 20 ಎಕರೆ ಜಾಗ ಗುರುತಿಸಲಾಗಿದೆ. ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ಶೀಘ್ರದಲ್ಲಿಯೇ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇನ್ನುಳಿದಂತೆ ಪತ್ರಿಕಾ ಭವನವನ್ನು ಪತ್ರಕರ್ತರ ಸಂಘದ ಸುಪರ್ದಿಗೆ ವಹಿಸುವ ಕುರಿತು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗುವುದು. ಜತೆಗೆ ಕಾಗಲಕರ್ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಸರಕಾರದ ವತಿಯಿಂದಲೇ ನೀಡುವ ಕುರಿತು ಚರ್ಚಿಸಲಾಗುವುದು ಎಂದರು.

ಮಕ್ಕಳು ದೇಶದ ಭದ್ರ ಬುನಾದಿಗಳು. ಹೀಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡುವ ಮೂಲಕ ದೇಶದ ಸಂಪನ್ಮೂಲವನ್ನಾಗಿ ನಿರ್ಮಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಪ್ರಿಯಾಂಕ ಖರ್ಗೆ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಪತ್ರಕರ್ತರ ಮಕ್ಕಳನ್ನು ಸನ್ಮಾನಿಸಿ ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News