ಐಎಂಎ ಮುಖ್ಯಸ್ಥ ಮನ್ಸೂರ್ ನನ್ನು ಮೈತ್ರಿ ಪಕ್ಷದವರೇ ಸಾಯಿಸಬಹುದು: ಬಿಜೆಪಿ ಮುಖಂಡ ಈಶ್ವರಪ್ಪ

Update: 2019-07-01 17:36 GMT

ಶಿವಮೊಗ್ಗ, ಜು.1: ಐಎಂಎ ಜ್ಯುವೆಲ್ಸ್ ಮುಖ್ಯಸ್ಥ ಮನ್ಸೂರ್ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. 

ಸೋಮವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮೈತ್ರಿ ಪಕ್ಷದ ಪ್ರಭಾವಿಗಳ ಹೆಸರು ಈ ವಂಚನೆ ಪ್ರಕರಣದಲ್ಲಿ ಕೇಳಿಬಂದಿದೆ. ಈ ಕಾರಣದಿಂದ ಮನ್ಸೂರ್ ನನ್ನು ಮೈತ್ರಿ ಪಕ್ಷದವರೇ ಸಾಯಿಸಬಹುದು. ಇಲ್ಲವೇ ಒತ್ತಡದಿಂದ, ಅವರೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದರೂ ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ.

ಮೈತ್ರಿ ಪಕ್ಷದಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ. ಇದು ಕೇವಲ ಆರಂಭವಾಗಿದೆ. ಇದು ಎಲ್ಲಿ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ಶಾಸಕರ ರಾಜೀನಾಮೆಯ ಹಿಂದೆ ಬಿಜೆಪಿಯ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದರು. 

ಸಿಎಂ ಕುಮಾರಸ್ವಾಮಿ ಅಮೆರಿಕಾ ಪ್ರವಾಸ ಹೋಗುವಾಗ ಈಶ್ವರಪ್ಪ ಹಾಗೂ ಯಡ್ಡಿಯೂರಪ್ಪನವರ ಅನುಮತಿ ಪಡೆದು ಹೋಗಬೇಕಾ ಎಂದು ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 'ನಮ್ಮ ಅನುಮತಿ ಪಡೆದು ಹೋಗುವ ಅಗತ್ಯವಿಲ್ಲ. ಆದರೆ ರಾಜ್ಯದಲ್ಲಿ ಜನರ ಸಮಸ್ಯೆ ಹೆಚ್ಚಾಗಿದೆ. ಅದನ್ನು ಪರಿಹರಿಸುವುದು ಬಿಟ್ಟು, ವಿದೇಶ ಪ್ರವಾಸ ಕೈಗೊಂಡಿರುವುದು ಎಷ್ಟು ಸರಿ ಎಂಬುವುದು ಬಿಜೆಪಿಯ ಪ್ರಶ್ನೆಯಾಗಿದೆ' ಎಂದರು. 

ಅಭದ್ರ: ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಕೆ.ಎಸ್.ಈಶ್ವರಪ್ಪ ಮಾತನಾಡಿ, 'ರಾಜ್ಯ ಸರ್ಕಾರ ಅಭದ್ರವಾಗಿದೆ. ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ. ಯಾವಾಗ ಬೇಕಾದರೂ ಈ ಸರ್ಕಾರ ಉರುಳಬಹುದಾಗಿದೆ' ಎಂದರು. 

ಸರ್ಕಾರದ ಆಡಳಿತ ವೈಫಲ್ಯದಿಂದ, ಮೈತ್ರಿ ಪಕ್ಷಗಳಲ್ಲಿನ ಭಿನ್ನಮತ, ಗೊಂದಲದಿಂದ ರಾಜಕೀಯ ಅಸ್ಥಿರತೆ ತಲೆದೋರಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಈ ಸರ್ಕಾರ ಯಾವಾಗ ಬೀಳುತ್ತದೆ ಎಂದು ಸ್ವತಃ ಕಾಂಗ್ರೆಸ್, ಜೆಡಿಎಸ್ ಶಾಸಕರೇ ಕೇಳುತ್ತಿದ್ದಾರೆ. ಆ ಮಟ್ಟಕ್ಕೆ ಸರ್ಕಾರದ ನಿಲುವುಗಳು ಶಾಸಕರಲ್ಲಿ ಬೇಸರ ಉಂಟು ಮಾಡಿವೆ ಎಂದರು. 

ಐಎಂಎ ವಂಚನೆ ಹಗರಣದಲ್ಲಿ ಸರ್ಕಾರದ ಸಚಿವರ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಎಸ್‍ಐಟಿಗೆ ವಹಿಸಿದರೆ ನಿಷ್ಪಕ್ಷಪಾತ ತನಿಖೆ ಅಸಾಧ್ಯವಾಗಿದೆ. ಈ ಕಾರಣದಿಂದ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಇದೇ ಸಂದರ್ಭದಲ್ಲಿ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News