ಪತ್ರಿಕಾ ಕ್ಷೇತ್ರಕ್ಕೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕು: ಸಚಿವ ಜಿ.ಟಿ.ದೇವೇಗೌಡ

Update: 2019-07-01 18:40 GMT

ಮೈಸೂರು, ಜು.1: ಪತ್ರಿಕಾ ಸ್ವಾತಂತ್ರ್ಯ ಧಮನ ಮಾಡಬಾರದು. ಪತ್ರಿಕಾ ಕ್ಷೇತ್ರಕ್ಕೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕು, ಪತ್ರಿಕೋದ್ಯಮಿಗಳಿಗೆ ಅಷ್ಟೇ ಜವಾಬ್ದಾರಿ ಹಾಗೂ ಸ್ವಯಂ ನಿಯಂತ್ರಣ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.

ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭ್ರಷ್ಟಾಚಾರ ಪ್ರತಿ ರಂಗದಲ್ಲಿ ಇದೆ. ಯಾರನ್ನೋ ರಂಜಿಸಲು ಸತ್ಯ ಸಂಶೋಧಿಸದೆ ವರದಿ ಮಾಡುವುದು ದ್ರೋಹವೆಸಗಿದಂತೆ, ಯಾವುದೇ ವ್ಯಕ್ತಿಯ ವೈಯುಕ್ತಿಕ ನಿಂಧನೆ, ತೇಜೋವಧೆ ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ವಿಷಯಾಧಾರಿತ ಹಾಗೂ ಸತ್ಯಾಧಾರಿತ ವರದಿಗಳು ಬರಬೇಕು ಈ ನಿಟ್ಟಿನಲ್ಲಿ ಮಾಧ್ಯಮಕ್ಕೆ ಸ್ವಯಂ ನಿಯಂತ್ರಣ ಅಗತ್ಯ ಎಂದರು.

ಮಾಧ್ಯಮ ಜನರ ಬಾಳಿಗೆ ಬೆಳಕು ಚೆಲ್ಲಬೇಕು ಅದರಂತೆ ಪ್ರತಿಯೊಬ್ಬರು ಪತ್ರಿಕೆ ಓದಬೇಕು. ಹಿರಿಯ ಪತ್ರಕರ್ತರರಾದ ಕೆ.ಬಿ. ಗಣಪತಿ, ರಾಜಶೇಖರ ಕೋಟಿ, ಕೃಷ್ಣವಟ್ಟಂ, ಇನ್ನಿತರ ಮಹನೀಯರನ್ನು ಸ್ಮರಿಸಿ, ಜವಾಬ್ದಾರಿಯನ್ನು ಅರಿತು ನಡೆದರೆ ಭವಿಷ್ಯವಿದೆ. ಕತ್ತಲೆಯಿಂದ ಬೆಳಕಿನಡೆಗೆ ಕೊಂಡೊಯ್ಯಬೇಕು. ಪ್ರತಿಯೊಬ್ಬ ಪ್ರತಿಭೆಯನ್ನು ಸರ್ಕಾರ ಗುರುತಿಸಲು ಸಾಧ್ಯವಿಲ್ಲ, ಅಂತಹ ಗುಪ್ತ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡಬೇಕು ಎಂದರು. ಸತ್ಯ ದಾರಿಯಲ್ಲಿ ನಡೆಯಬೇಕು. ಸತ್ಯ ಸುದ್ದಿ ಪ್ರಕಟಿಸುತ್ತೇವೆ ಎಂದು ಪ್ರತಿಯೊಬ್ಬ ಪತ್ರಕರ್ತರು ಪ್ರತಿಜ್ಞೆ ಮಾಡಬೇಕು ಎಂದರು.

ಮಾಧ್ಯಮ ಅಕಾಡೆಮಿ ಅಧ್ಯಕ್ಷ ಡಾ.ಪದ್ಮರಾಜ ದಂಡಾವತಿಯವರು ಮಾತನಾಡಿ, ಸಮಾಜದ ರೋಗದ ಧನ್ವಂತರಿಯಂತಿರುವ ಪತ್ರಿಕೋದ್ಯಮದ ಬಗ್ಗೆ ತೀವ್ರ ಆಕ್ಷೇಪ ಕೇಳಿ ಬರುತ್ತಿದ್ದು, 90 ನಂತರ ಹಣದ ಹಿಂದೆ ಬೆನ್ನತ್ತುವ ಡಿವಿಜಿ, ಟಿಎಸ್‍ಆರ್ ನಂತಹ ಕಾಲವಲ್ಲ. ಪ್ರಚಾರದ ಸಂಖ್ಯೆ ಹೆಚ್ಚಿಸಿಕೊಳ್ಳಲು ಪತ್ರಿಕೆ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ನೀಡಬೇಕು. ನಷ್ಟ ಭರಿಸಲು ಜಾಹೀರಾತು ಮೊರೆ ಹೋಗಬೇಕಾಗುತ್ತದೆ. ಪೇಯಿಡ್ ನ್ಯೂಸ್‍ ನಿಂದ ಮಾಧ್ಯಮದ ದುರುಪಯೋಗವಾಗುತ್ತಿದೆ. ಒಟ್ಟಾರೆ ಪತ್ರಿಕೋಧ್ಯಮವು ನಷ್ಟದಲ್ಲಿ ಇವೆ. ಒಟ್ಟಾರೆ ಅಭಿವ್ಯಕ್ತಿ ಸ್ವಾತಂತ್ರ್ಯ ನೆಲೆಗಟ್ಟಿನಲ್ಲಿ ಪತ್ರಿಕೋದ್ಯಮದಲ್ಲಿ ನಡೆಸುವ ಮೂಲಕ ಮಹಾತ್ಮ ಗಾಂಧಿಯವರ ಕನಸಿನ ಮಾಧ್ಯಮ ಕಟ್ಟಬೇಕು ಎಂದರು.

ವಿಜಯವಾಣಿ ಪತ್ರಿಕೆಯ ಉಪಸಂಪಾದಕ ಹೆಚ್.ಕೆ.ಗುರುಪ್ರಸಾದ್ ವರ್ಷದ ವರದಿಗಾರರಾಗಿ, ಟೈಮ್ಸ್ ಆಫ್ ಇಂಡಿಯಾದ ಎಸ್.ಆರ್.ಮಧುಸೂದನ್ ಛಾಯಾಗ್ರಾಹಕರಾಗಿ, ದೃಶ್ಯಮಾಧ್ಯಮದ ಉತ್ತಮ ವರದಿಗಾರಿಕೆಗೆ ಪಬ್ಲಿಕ್ ಟಿ.ವಿಯ ಕೆ.ಪಿ.ನಾಗರಾಜ್ ಹಾಗೂ ಉತ್ತಮ ಛಾಯಾಗ್ರಾಹಕರಾಗಿ ಪಬ್ಲಿಕ್ ಟಿ.ವಿ. ಕ್ಯಾಮರಾಮನ್ ಈ ಕಾರ್ತಿಕ್ ಅವರನ್ನು ಸನ್ಮಾನಿಸಲಾಯಿತು.

ಸಂಯುಕ್ತ ಕರ್ನಾಟಕ ಪ್ರಧಾನ ಉಪ ಸಂಪಾದಕ ಎಂ.ಟಿ.ಮಹದೇವ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ, ಸಂಪಾದಕೀಯ ವಿಭಾಗದಲ್ಲಿ ಯಶ್ ಟೆಲ್ ಪ್ರಧಾನ ಸಂಪಾದಕಿ ಬಿ.ವೈ.ಸಾಹಿತ್ಯ, ವರ್ಷದ ಗ್ರಾಮಾಂತರ ಪತ್ರಕರ್ತರಾಗಿ ತಿ.ನರಸೀಪುರದ ಆಂದೋಲನದ ವರದಿಗಾರ ಎಂ.ನಾರಾಯಣ, ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಛಾಯಾಗ್ರಾಹಕಿ ಬಿ.ಆರ್.ಸವಿತಾ ವರ್ಷದ ಛಾಯಾಗ್ರಾಹಕಿಯಾಗಿ, ದೃಶ್ಯ ಮಾಧ್ಯಮದ ಹಿರಿಯ ವರದಿಗಾರ ಪ್ರಜಾ ಟಿ.ವಿ.ಯ ಸೋಮಶೇಖರ್, ದೂರದರ್ಶನ ಛಾಯಾಗ್ರಾಹಕ ರಾಮು ಇವರುಗಳನ್ನು ಪ್ರಶಸ್ತಿ ಪಲಕ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಉಷಾರಾಣಿ, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ಶಾಸಕ ಹರ್ಷವರ್ಧನ್, ಜಿ.ಪಂ. ಅಧ್ಯಕ್ಷೆ ಪರಿಮಳ ಶ್ಯಾಂ, ವಾರ್ತಾಧಿಕಾರಿ ರಾಜು, ಸಂಘದ ಅಧ್ಯಕ್ಷರಾದ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜಿ.ಲೋಕೇಶ್ ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News