ಸಿಎಸ್ಆರ್ ನಿಧಿ ಬಳಸಿ ಜಿಲ್ಲೆಯ ಅಭಿವೃದ್ಧಿಗೆ ಕೈ ಜೋಡಿಸಿ: ಸಚಿವ ಕೃಷ್ಣಬೈರೇಗೌಡ

Update: 2019-07-01 18:54 GMT

ಕೋಲಾರ, ಜು.1: ಕಂಪನಿಗಳು ಸಿಎಸ್ಆರ್ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣಬೈರೇಗೌಡ ಅವರು ತಿಳಿಸಿದರು. 

ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಿ.ಎಸ್.ಆರ್ ಅನುದಾನದಡಿ ಕೋಲಾರ ಅಮಾನಿಕೆರೆ ಮತ್ತು ಕೋಡಿಕಣ್ಣೂರು ಕೆರೆಗಳ ಜೀಣೋದ್ಧಾರದ ಬಗ್ಗೆ ಮಾನ್ಯ ಶಾಸಕರ ಹಾಗೂ ವಿಧಾನಪರಿಷತ್ ಸದಸ್ಯರು ಹಾಗೂ ಕಂಪನಿಗಳ ಜೊತೆ ಹಮ್ಮಿಕೊಂಡಿದ್ದ ಸಭೆಯ ಕುರಿತು ಅವರು ಮಾತನಾಡಿದರು. ಕಂಪನಿಗಳು ಜಿಲ್ಲೆಯ ಭೂಮಿ, ಸಂಪನ್ಮೂಲಗಳು ಹಾಗೂ ನೀರನ್ನು ಬಳಸಿಕೊಂಡು ಕೈಗಾರಿಕೆಗಳನ್ನು ನಡೆಸುತ್ತೀರಿ. ಆದ್ದರಿಂದ ಜಿಲ್ಲೆಯ ಜನರಿಗೆ ಕೊಡುಗೆ ನೀಡಲು ಸಿಎಸ್ಆರ್ ನಿಧಿಯನ್ನು ಸದ್ಭಳಕೆ ಮಾಡಿ ಎಂದು ತಿಳಿಸಿದರು. 

ಕೇಂದ್ರದಿಂದ ಕೆ.ಸಿ ವ್ಯಾಲಿ ಯೋಜನೆ ಶ್ಲಾಘನೆ: ಕೋಲಾರ ಜಿಲ್ಲೆಗೆ ಕೆ.ಸಿ ವ್ಯಾಲಿ ನೀರು ಹರಿಯುತಿದ್ದು, ಈಗಾಗಲೇ ಸುಮಾರು 18 ಕೆರೆಗಳು ತುಂಬಿವೆ. ಇದರಿಂದ ಕೈಗಾರಿಕೆಗಳಿಗೆ ಅಗತ್ಯವಾದ ನೀರು ದೊರೆಯುತ್ತದೆ. ಜಿಲ್ಲೆಯ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ನೀರಿನ ಮರುಬಳಕೆ ಕುರಿತ ವಿಶ್ವದ ಬೃಹತ್ ಯೋಜನೆ ಕೆ.ಸಿ ವ್ಯಾಲಿ ಯೋಜನೆಯಾಗಿದೆ. ಭಾರತ ಸರ್ಕಾರವು ಇದನ್ನು ಜಗತ್ತಿನ ಅತ್ಯುತ್ತಮ ನೀರಿನ ಮರುಬಳಕೆ ಯೋಜನೆ ಎಂದು ಶ್ಲಾಘಿಸಿದ್ದು, ಬೇರೆ ರಾಜ್ಯಗಳು ಈ ರೀತಿ ಯೋಜನೆಯನ್ನು ಅಳವಡಿಸಿಕೊಳ್ಳುವಂತೆ ನಿರ್ದೇಶನ ನೀಡಿರುವುದು ಹೆಮ್ಮೆಯ ವಿಷಯ ಎಂದರು. 

ಜಿಲ್ಲೆಯ ಕೆರೆಗಳಲ್ಲಿ ಹೂಳು ತೆಗೆದು ಸಮರ್ಪಕವಾಗಿ ಗಡಿ ಗುರುತಿಸಿ ಬಂಡು ನಿರ್ಮಿಸಿ, ಕೆರೆಗಳಲ್ಲಿರುವ ಬಳ್ಳಾರಿ ಜಾಲಿ ಗಿಡಗಳನ್ನು ತೆಗೆದು ಕೆರೆ ಸಂರಕ್ಷಣೆ ಮಾಡಬೇಕು. ನರಸಾಪುರ, ಕೋಲಾರದ ಅಮಾನಿಕೆರೆ, ಕೋಡಿಕಣ್ಣೂರು ಕೆರೆ ಹಾಗೂ ಪೆರ್ಜೇನಹಳ್ಳಿ ಕೆರೆಗಳನ್ನು ಅಭಿವೃದ್ಧಿಪಡಿಸಿ ವಾಕಿಂಗ್ ಟ್ರ್ಯಾಕ್ ಹಾಗೂ ಬೋಟಿಂಗ್ ವ್ಯವಸ್ಥೆ ನಿರ್ಮಿಸಲು ಕಂಪನಿಗಳು ಸಿ.ಎಸ್.ಆರ್ ಅನುದಾನ ಬಳಕೆ ಮಾಡುವಂತೆ ಸಲಹೆ ನೀಡಿದರು. ಅಲ್ಲದೆ, ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾಕ್‍ನ್ನು ಅಳವಡಿಸಲು ಹಾಗೂ ಜಿಲ್ಲೆಯಲ್ಲಿ ಕನಿಷ್ಠ 3 ರಿಂದ 4 ಕಡೆ ಟ್ರ್ರೆಕ್ಕಿಂಗ್ ವ್ಯವಸ್ಥೆಗೆ ಸಿ.ಎಸ್.ಆರ್ ಅನುದಾನವನ್ನು  ಕಂಪನಿಗಳು ಬಳಸುವಂತೆ ಮಾಡಿದರು. 

ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಮಾತನಾಡಿ, ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳು ಪ್ರಮುಖವಾಗಿ ನೀರು ಹಾಗೂ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿವೆ. ಜಿಲ್ಲೆಗೆ ಕೆ.ಸಿ ವ್ಯಾಲಿ ನೀರು ಬಂದಿದ್ದು, ನೀರಿನ ಸಮಸ್ಯೆ ನೀಗಲಿದೆ. ವೇಮಗಲ್ ಭಾಗದಲ್ಲಿ ಡೆಡಿಕೇಟೆಡ್ ಪವರ್‍ಸ್ಟೇಷನ್ ಅನ್ನು ಸ್ಥಾಪಿಸಿ ಸುತ್ತಲಿನ ಕೈಗಾರಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಅವರು ಸಿ.ಎಸ್.ಆರ್ ಅನುದಾನದಲ್ಲಿ ಆಗಸ್ಟ್ 15 ರ ವೇಳೆಗೆ ಸಾಮಾಜಿಕ ಕಳಕಳಿಯುಳ್ಳ ಅಭಿವೃದ್ಧಿ ಕಾರ್ಯಗಳಿಗೆ ಬಳಸಿ ಕೆಲಸಗಳನ್ನು ಪ್ರಾರಂಭಿಸುವಂತೆ ತಿಳಿಸಿದರು. 

ಯರಗೋಳ್ ಜಲಾಶಯದಿಂದ ಮಾಲೂರು, ಕೋಲಾರ ಹಾಗೂ ಬಂಗಾರಪೇಟೆ ತಾಲೂಕುಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುವುದು. ಜಿಲ್ಲೆಯ ಯುವಕರು ನೀರಿಲ್ಲದೆ ಕೃಷಿ ಮಾಡಲಾಗದೆ ಬೆಂಗಳೂರಿಗೆ ಹೋಗಿ 8 ರಿಂದ 10 ಸಾವಿರಕ್ಕೆ ದುಡಿಯುತ್ತಿದ್ದಾರೆ. ಜಿಲ್ಲೆಯ ಕೆರೆಗಳು ತುಂಬಿ ಜಿಲ್ಲೆಗೆ ನೀರು ದೊರೆಯುವುದರಿಂದ ಹಂತ ಹಂತವಾಗಿ ಅವರು ಕೋಲಾರಕ್ಕೆ ವಾಪಸ್ಸು ಬಂದು ಆಧುನಿಕ ಬೇಸಾಯ ಮಾಡಿ ಸ್ವಾವಲಂಬಿಗಳಾಗಿ ದುಡಿಯಲಿದ್ದಾರೆ. ಆದ್ದರಿಂದ ಕೆ.ಜಿ.ಎಫ್ ನಗರ ಹೊರತುಪಡಿಸಿ ಉಳಿದ ಕೋಲಾರ ಜಿಲ್ಲೆಯ ಭಾಗಗಳಿಗೆ ನೂತನ ಕೈಗಾರಿಕೆಗಳ ಸ್ಥಾಪನೆ ಅವಶ್ಯಕತೆ ಇಲ್ಲ ಎಂದರು. 

ಸಭೆಯಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಚಿವರಾದ ಹೆಚ್.ನಾಗೇಶ್, ಕೋಲಾರ ಶಾಸಕರಾದ ಕೆ.ಶ್ರೀನಿವಾಸಗೌಡ, ಮಾಲೂರು ಶಾಸಕರಾದ ಕೆ.ವೈ. ನಂಜೇಗೌಡ, ವಿಧಾನ ಪರಿಷತ್ ಸದಸ್ಯರಾದ ತೂಪಲ್ಲಿ ಚೌಡರೆಡ್ಡಿ, ನಸೀರ್ ಅಹಮದ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಯಶೋಧ ಕೃಷ್ಣಮೂರ್ತಿ, ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ.ಜಗದೀಶ್, ಸೇರಿದಂತೆ ವಿವಿಧ ಕಂಪನಿಗಳ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News