ನಮೋ ನನ್ನ ಮಾತು ಆಲಿಸುತ್ತಿಲ್ಲ, ಚೀನಾಗೆ ಹೋಗುತ್ತೇನೆ: ಸುಬ್ರಮಣಿಯನ್ ಸ್ವಾಮಿ ಟ್ವೀಟ್

Update: 2019-07-02 07:50 GMT

ಹೊಸದಿಲ್ಲಿ, ಜು.2: ಪ್ರಧಾನಿ ನರೇಂದ್ರ ಮೋದಿ ತಮ್ಮ ಅಭಿಪ್ರಾಯಗಳನ್ನು ಕೇಳಲು ಆಸಕ್ತಿ ಹೊಂದಿಲ್ಲದೇ ಇರುವುದರಿಂದ ಈ ವರ್ಷ  ವಿದ್ವಾಂಸರ ಸಭೆಯಲ್ಲಿ ಭಾಗವಹಿಸಲು ತಮಗೆ ಆಹ್ವಾನ ದೊರೆತಿರುವುದರಿಂದ ಚೀನಾ ದೇಶಕ್ಕೆ ಹೋಗುವುದಾಗಿ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ ಸ್ವಾಮಿ, “ಚೀನಾದ ಖ್ಯಾತ ತ್ಸಿಂಘುವಾ ವಿಶ್ವವಿದ್ಯಾಲಯವು ‘ಚೈನಾಸ್ ಇಕನಾಮಿಕ್ ಡೆವಲೆಪ್ಮೆಂಟ್- ಎ ರಿವೀವ್ ಆಫ್ ಲಾಸ್ಟ್ 70 ಇಯರ್ಸ್’ ಎಂಬ ವಿಷಯದ ಮೇಲೆ ಮಾತನಾಡಲು ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ವಿದ್ವಾಂಸರ ಸಭೆಗೆ ನನಗೆ ಆಹ್ವಾನ ನೀಡಿದೆ. ನಮೋ ನನ್ನ ಅಭಿಪ್ರಾಯ ಆಲಿಸಲು ಆಸಕ್ತಿ ಹೊಂದಿಲ್ಲದ ಕಾರಣ ನಾನು ಚೀನಾಗೆ ಹೋಗಬಹುದು'' ಎಂದು ಹೇಳಿದ್ದಾರೆ.

ಸ್ವಾಮಿ ಅವರ ಈ ಟ್ವೀಟ್ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಅವರು ದೇಶ ಬಿಟ್ಟು ಹೋಗುವ ಬೆದರಿಕೆಯನ್ನು ಈ ಮೂಲಕ ಹಾಕಿದ್ದಾರೆ ಎಂದು ಕೆಲವರು ಹೇಳಿ, ದೇಶ ಬಿಟ್ಟು ತೆರಳದಂತೆ ಅವರಿಗೆ ಮನವಿ ಮಾಡಿದರೆ ಇನ್ನು ಕೆಲವರು ಇಂತಹ ನಿರ್ಧಾರಕ್ಕೆ ಕಾರಣವೇನೆಂದು ಪ್ರಶ್ನಿಸಿದ್ದಾರೆ.

ತಮ್ಮ ನೇರಾನೇರ ಮಾತುಗಳಿಗೆ ಹೆಸರಾಗಿರುವ ಸುಬ್ರಮಣಿಯನ್ ಸ್ವಾಮಿ ತಮ್ಮದೇ ಪಕ್ಷದ ಸರಕಾರದ ಕೆಲವೊಂದು ನೀತಿಗಳನ್ನು ಟೀಕಿಸಲು ಯಾವತ್ತೂ ಹಿಂಜರಿದವರೇ ಅಲ್ಲ. ಅರುಣ್ ಜೇಟ್ಲಿ ವಿತ್ತ ಸಚಿವರಾಗಿದ್ದ ವೇಳೆ ಹಲವಾರು ವಿಚಾರಗಳ ಬಗ್ಗೆ ತಮ್ಮ ಅಸಮ್ಮತಿಯನ್ನು ಸ್ವಾಮಿ ವ್ಯಕ್ತಪಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News