ಆನಂದ್ ಸಿಂಗ್ ರಾಜೀನಾಮೆ ಪತ್ರ ಮಾತ್ರ ಕೈಸೇರಿದೆ: ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ

Update: 2019-07-03 12:54 GMT

ಬೆಂಗಳೂರು, ಜು. 3: ಇಬ್ಬರು ಶಾಸಕರು ರಾಜೀನಾಮೆ ಕೊಟ್ಟಿದ್ದರೆ ಒಂದನ್ನು ನಾನು ಬಚ್ಚಿಟ್ಟಿಕೊಳ್ಳಲು ಸಾಧ್ಯವಿಲ್ಲ. ನನಗೆ ಈವರೆಗೂ ಆನಂದ್ ಸಿಂಗ್ ಅವರ ರಾಜೀನಾಮೆ ಪತ್ರವಷ್ಟೇ ಬಂದಿದೆ. ಈ ಬಗ್ಗೆ ನಿಯಮಾವಳಿಗಳ ಅನ್ವಯ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಶಾಸಕರಾಗಿ ಆಯ್ಕೆಯಾದವರಿಗೆ ಯಾರಿಗೆ ರಾಜೀನಾಮೆ ನೀಡಬೇಕೆಂಬ ಅರಿವಿರಬೇಕಾಗುತ್ತದೆ. ಅವರಿಗೆ ಸಮಯವಿದ್ದರೆ ರಾಷ್ಟ್ರಪತಿಯವರಿಗೂ ಒಂದು ರಾಜೀನಾಮೆ ನೀಡಲಿ’ ಎಂದು ಹೇಳಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಜಯನಗರ ಕ್ಷೇತ್ರದ ಆನಂದ್ ಸಿಂಗ್ ಅವರು ರಾಜ್ಯಪಾಲರ ಭೇಟಿ ಬಗ್ಗೆ ನಮ್ಮದೇನೂ ಅಭ್ಯಂತರವಿಲ್ಲ. ಅವರು ರಾಷ್ಟ್ರಪತಿಯವರನ್ನು ಭೇಟಿ ಮಾಡಲಿ ಎಂದರು.

ಈವರೆಗೂ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಒಬ್ಬರು ಮಾತ್ರ ನನಗೆ ರಾಜೀನಾಮೆ ನೀಡಿದ್ದಾರೆ. ಯಾರೇ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಕಾನೂನು ರೀತಿ ನಿಯಮಾವಳಿಗಳನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಮೇಶ್‌ಕುಮಾರ್ ತಿಳಿಸಿದರು. ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿರುವ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಅದರ ಬಗ್ಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಯಾರು ಬೇಕಾದರೂ ಆಕ್ಷೇಪ ವ್ಯಕ್ತಪಡಿಸಬಹುದು. ಅಸಮಾಧಾನವಿದ್ದರೆ ದೂರು ನೀಡಬಹುದು ಎಂದು ಹೇಳಿದರು.

ಸ್ಪೀಕರ್ ಅವರಿಗೆ ಯಾವುದೇ ಪರಮಾಧಿಕಾರವಿಲ್ಲ. ಸಂವಿಧಾನ, ಕಾನೂನು ಮತ್ತು ನಿಯಮಾವಳಿ ಪ್ರಕಾರ ‘ಜವಾಬ್ದಾರಿ’ ಇರುತ್ತದೆ. ಅದನ್ನು ನಿರ್ವಹಿಸಬೇಕು ಅಷ್ಟೆ ಎಂದ ರಮೇಶ್ ಕುಮಾರ್, ಶಾಸಕರ ರಾಜೀನಾಮೆಯನ್ನು ನಾನು ಒಪ್ಪುವ ಅಥವಾ ಒಪ್ಪದಿರುವ ಪ್ರಶ್ನೆಯಲ್ಲ. ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದರು.

ಆನಂದ್‌ಸಿಂಗ್ ರಾಜೀನಾಮೆ ನೀಡಿರುವ ಪತ್ರ ನನಗೆ ತಲುಪಿದೆ. ಅವರು ಒಂದು ಪಕ್ಷದ ಶಾಸಕರಾಗಿದ್ದು, ಆ ಪಕ್ಷದ ಹಾಗೂ ಜನರ ಆಕ್ಷೇಪವೇನಾದರೂ ಇದೆಯೋ ಗೊತ್ತಿಲ್ಲ. ರಾಜೀನಾಮೆಗೆ ಕಾರಣವೂ ಗೊತ್ತಿಲ್ಲ. ಚುನಾಯಿತ ಪ್ರತಿನಿಧಿಯ ನಡವಳಿಕೆ ಇಷ್ಟವಾಗದಿದ್ದರೆ ಅವರನ್ನು ವಾಪಸ್ ಕಳುಹಿಸುವ ಅವಕಾಶವೂ ಇಲ್ಲ ಎಂದು ಹೇಳಿದರು

ಜನಪ್ರತಿನಿಧಿಗಳಾದವರೂ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆಂಬ ಆಶಯವಿತ್ತು. ಹೀಗಾಗಿ ಸಾರ್ವಜನಿಕರ ಅಭಿಪ್ರಾಯ ಕೇಳಬೇಕಾದ ಅಗತ್ಯವಿದೆ. ಹಾಗೆಂದು ತಾವು ಯಾರನ್ನೂ ರಾಜೀನಾಮೆ ಬಗ್ಗೆ ಆಕ್ಷೇಪಿಸಿ ಎಂದು ಹೇಳುವುದಿಲ್ಲ. ಆಕ್ಷೇಪಗಳಿದ್ದರೆ ಅವುಗಳನ್ನು ಪರಿಶೀಲನೆ ನಡೆಸಬೇಕಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News