ಮೈತ್ರಿ ಸರಕಾರ ಕಲ್ಲು ಬಂಡೆ ಇದ್ದಂತೆ ಇದನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ: ಸಿದ್ದರಾಮಯ್ಯ

Update: 2019-07-04 08:09 GMT

ಮೈಸೂರು, ಜು.4: ಮೈತ್ರಿ ಸರಕಾರ ಕಲ್ಲು ಬಂಡೆ ಇದ್ದಂತೆ ಇದನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ, ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ಬಿಜೆಪಿಯವರ ಆಪರೇಷನ್ ಕಮಲಕ್ಕೆ ಸವಾಲು ಹಾಕಿದ್ದಾರೆ.

ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಮೈಸೂರು ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಗುರುವಾರ ಭೇಟಿ ನೀಡಿ ಕಾಂಗ್ರೆಸ್ ಭವನಕ್ಕೆ ಇನ್ನೂ ಆಗಬೇಕಿರುವ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಮೈತ್ರಿ ಸರಕಾರ ಒಂದು ರೀತಿಯಲ್ಲಿ ಕಲ್ಲು ಬಂಡೆ ಇದ್ದಹಾಗೆ. ಬಿಜೆಪಿಯವರು ಎಷ್ಟೇ ಹಣ, ಆಮಿಷ ತೋರಿಸಿದರು ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಆಪರೇಷನ್ ಕಮಲ ಮಾಡಿ ಹಿಂಬಾಗಿಲ ಮೂಲಕ ಅಧಿಕಾರ ನಡೆಸಬೇಕು ಎಂದು ಮೋದಿ, ಅಮಿತ್ ಶಾ ಪ್ರಯತ್ನಿಸುತ್ತಿದ್ದಾರೆ. ಈಗಾಗಲೆ ಜೆಡಿಎಸ್ ಪಕ್ಷದ ಹಲವು ಶಾಸಕರಿಗೆ ಹಣ ಕೊಡಲು ಮುಂದಾಗಿ ವಾಪಸ್ ಹೋಗಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಆಪರೇಷನ್ ಕಮಲಕ್ಕೆ ಮೋದಿ ಹಾಗೂ ಅಮಿತ್ ಶಾ ಕಾರಣ ಎಂದು ಕಿಡಿಕಾರಿದರು.

ಬಿಜೆಪಿಯವರು ಆಪರೇಷನ್ ಕಮಲ ನಡೆಸುತ್ತಿಲ್ಲ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನೋಡ್ರಿ ನಾನಂತು ಮೋದಿ, ಅಮಿತ್ ಶಾ ಜೊತೆ ಮಾತನಾಡಿಲ್ಲ, ಜಿ.ಟಿ.ದೇವೇಗೌಡ ಮಾತನಾಡಿರಬಹುದೇನೊ ಎಂದು ತಿರುಗೇಟು ನೀಡಿದರು.

ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿರುವುದು ಸತ್ಯ ಎಂದು ಇದೇ ವೇಳೆ ಮತ್ತೊಮ್ಮೆ ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News