ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣ: ಎಬಿವಿಪಿ ನಿಷೇಧಿಸಲು ಒತ್ತಾಯಿಸಿ ಚಿಕ್ಕಮಗಳೂರಿನಲ್ಲಿ ಧರಣಿ

Update: 2019-07-04 12:16 GMT

ಚಿಕ್ಕಮಗಳೂರು, ಜು.4: ಪುತ್ತೂರಿನಲ್ಲಿ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಎನ್ನಲಾಗಿರುವ ಕಾಲೇಜು ವಿದ್ಯಾರ್ಥಿಗಳು ತಮ್ಮ ಸಹಪಾಠಿ ವಿದ್ಯಾರ್ಥಿನಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಲ್ಲದೇ ಅತ್ಯಾಚಾರದ ದೃಶ್ಯಗಳನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಪೈಶಾಚಿಕ ಕೃತ್ಯ ಎಸಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಯಾಗಿದೆ. ಹೀಗಾಗಿ, ಎಬಿವಿಪಿ ಸಂಘಟನೆಯನ್ನು ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸಿ ಎನ್‍ಎಸ್‍ಯುಐ ಕಾರ್ಯಕರ್ತರು ಗುರುವಾರ ನಗರದ ಎಐಟಿ ಕಾಲೇಜು ವೃತ್ತದಲ್ಲಿ ಧರಣಿ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲೆ ಅಕ್ಷರಸ್ಥರ ಜಿಲ್ಲೆ ಎಂದೇ ರಾಜ್ಯದಲ್ಲಿ ಹೆಸರು ವಾಸಿಯಾಗಿದೆ. ಆದರೆ ಅಕ್ಷರಸ್ಥರ ಜಿಲ್ಲೆಯಲ್ಲಿ ಮನುಷ್ಯತ್ವವನ್ನೇ ಮರೆತು ಹಾಡಹಗಲೇ ವಿದ್ಯಾರ್ಥಿನಿಯ ಅತ್ಯಾಚಾರಗೈದಿರುವ ಘಟನೆಯಿಂದಾಗಿ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಅತ್ಯಾಚಾರ ಆರೋಪಿಗಳು ಎಬಿವಿಪಿ ಸಂಘಟನೆಯ ಕಾರ್ಯಕರ್ತರೆಂಬುದು ಈಗಾಗಲೇ ದೃಢಪಟ್ಟಿದ್ದು, ಈ ಸಂಘಟನೆಯ ಐವರು ವಿದ್ಯಾರ್ಥಿಗಳು ತಮ್ಮ ಸಂಘಟನೆಯ ಸಹವರ್ತಿ ವಿದ್ಯಾರ್ಥಿಗೆ ಅಮಲು ಪದಾರ್ಥ ನೀಡಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆಂದು ತಿಳಿದುಬಂದಿದೆ. ಪೊಲೀಸರು ಈ ಸಂಘಟನೆಯ ಐವರು ಆರೋಪಿಗಳನ್ನು ಬಂಧಿಸಿದ್ದಾರಾದರೂ ಪ್ರಭಾವಿ ಸಂಘಟನೆ ಸದಸ್ಯರಾಗಿರುವ ಹಾಗೂ ಪ್ರಭಾವಿ ಪಕ್ಷದ ಮುಖಂಡರ ಬೆಂಬಲ ಹೊಂದಿರುವ ಆರೋಪಿಗಳು ತಮ್ಮ ಪ್ರಭಾವ ಬಳಸಿ ಶಿಕ್ಷೆಯಿಂದ ಪಾರಾಗುವ ಸಾಧ್ಯತೆ ಹೆಚ್ಚಿದೆ. ಪೊಲೀಸರು ಇಂತಹ ಯಾವುದೇ ಪ್ರಭಾವಕ್ಕೊಳಗಾಗದೇ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ನೊಂದ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಂಡಬೇಕೆಂದು ಸಂಘಟನೆಯ ಮುಖಂಡರು ಆಗ್ರಹಿಸಿದರು.

ಅತ್ಯಾಚಾರ ಆರೋಪಿಗಳು ಪುತ್ತೂರು ಪಟ್ಟಣದ ಸ್ವಾಮಿ ವಿವೇಕಾನಂದ ಹೆಸರಿನ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಈ ಕಾಲೇಜು ಸಂಪೂರ್ಣವಾಗಿ ಎಬಿವಿಪಿ ಸಂಘಟನೆಯ ಪ್ರಭಾವ ಹೊಂದಿದೆ. ಎಬಿವಿಪಿ ಸಂಘಟನೆಯ ಐವರು ಸದಸ್ಯರು ಇದೇ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ. ಅಲ್ಲದೇ ಇದೇ ಕಾಲೇಜಿನ ತಮ್ಮ ಸಹಪಾಠಿಯನ್ನೇ ಅತ್ಯಾಚಾರ ಎಸಗಿದ್ದಾರೆಂದರೆ ಅವರ ತಪ್ಪಿಗೆ ಕ್ಷಮೆ ಎಂಬುದೇ ಇಲ್ಲ. ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಭವಿಷ್ಯದ ಹಿತದೃಷ್ಟಿಯಿಂದ ಕೂಡಲೇ ಎಬಿವಿಪಿ ಸಂಘಟನೆಗೆ ರಾಜ್ಯದಲ್ಲಿ ನಿಷೇಧ ಹೇರಬೇಕೆಂದು ಆಗ್ರಹಿಸಿದ ಮುಖಂಡರು, ಮಹಿಳೆಯರನ್ನು ಸಹೋದರಿಯರು, ತಾಯಂದಿರೆಂದು ಭಾಷಣಗಳಲ್ಲಿ ಪುಂಖಾನುಪುಂಖವಾಗಿ ಭಾಷಣ ಬಿಗಿಯುವ ಸಂಘಟನೆಯ ಮುಖಂಡರು ತಮ್ಮ ಸಂಘದ ಸದಸ್ಯರಿಗೆ ಬೋಧಿಸುತ್ತಿರುವ ನಡವಳಿಕೆ ಏನೆಂಬುದು ಈ ಘಟನೆಯಿಂದ ಸಾಬೀತಾಗಿದೆ ಎಂದು ಆರೋಪಿಸಿದರು.

ಸಂಘಪರಿವಾರದ ಸಂಘಟನೆಗಳು ಮಹಿಳೆಯರು ಹಾಗೂ ಯುವತಿಯರನ್ನು ಯಾವಾಗಲೂ ಕೀಳು ಭಾವನೆಯಿಂದಲೇ ನೋಡುತ್ತಾ ಬಂದಿದೆ. ಇಂತಹ ಸಂಘಟನೆಗಳಿಂದ ಮಹಿಳೆಯರು, ಯುವತಿಯರಿಗೆ ರಕ್ಷಣೆ ಎಂಬುದೇ ಇಲ್ಲ. ಈ ಸಂಘಟನೆಯಲ್ಲಿ ಗುರುತಿಸಿಕೊಂಡ ವಿದ್ಯಾರ್ಥಿನಿಯರು, ಯುವತಿಯರು ತಮ್ಮ ಸಹೋದರಿಗಾದ ಅನ್ಯಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಘಟನೆಯಿಂದ ಕೂಡಲೇ ಹೊರಬರಬೇಕು. ಅಲ್ಲದೇ ಕೆಳವರ್ಗದ ಯುವತಿಯ ಮೇಲಾದ ದೌರ್ಜನ್ಯದ ವಿರುದ್ಧ ಬೀದಿಗಿಳಿದು ಹೋರಾಡಬೇಕೆಂದು ಎನ್‍ಎಸ್‍ಯುಐ ಮುಖಂಡರು ಇದೇ ವೇಳೆ ಕರೆ ನೀಡಿದರು.

ಈ ಘಟನೆ ಸಂಬಂಧ ಸಂಘಟನೆ ರಾಜ್ಯಾದ್ಯಂತ ಹೋರಾಟ ರೂಪಿಸಿದೆ. ಪೊಲೀಸರು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸದಿದ್ದಲ್ಲಿ ಹಾಗೂ ಹೆಣ್ಣುಮಕ್ಕಳ ಪಾಲಿಗೆ ಮುಳುವಾಗಿರುವ ಎಬಿವಿಪಿ ಸಂಘಟನೆಯನ್ನು ಸರಕಾರಗಳು ನಿಷೇಧಿಸದಿದ್ದಲ್ಲಿ ಎನ್‍ಎಸ್‍ಯುಐ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಮುಂದಿನ ದಿನಗಳಲ್ಲಿ ರೂಪಿಸಲು ಹಿಂಜರಿಯುವದಿಲ್ಲ ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಧರಣಿ ಬಳಿಕ ಸಂಘಟನೆಯ ಮುಖಂಡರು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರ ಹಾಗೂ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಆದಿಲ್, ಮುಖಂಡರಾದ ಪವನ್, ಅಝರ್, ನಾಗರಾಜು, ನಿಹಾಲ್, ಸೈಫ್, ರಘುನಾಥ್ ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News