ಎಬಿವಿಪಿ ನಿಷೇಧಕ್ಕೆ ಪಟ್ಟು: ಶಿವಮೊಗ್ಗದಲ್ಲಿ ಎನ್‍ಎಸ್‍ಯುಐ ಪ್ರತಿಭಟನೆ

Update: 2019-07-04 12:27 GMT

ಶಿವಮೊಗ್ಗ, ಜು. 4: ಮಂಗಳೂರು ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಎಬಿವಿಪಿ ಸಂಘಟನೆಯ ಕಾರ್ಯಕರ್ತರ ವಿರುದ್ಧ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಗುರುವಾರ ನಗರದಲ್ಲಿ ಎನ್‍ಎಸ್‍ಯುಐ ಸಂಘಟನೆಯ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. 

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದ ಕಾರ್ಯಕರ್ತರು, ಎಬಿವಿಪಿ ಸಂಘಟನೆ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ನಂತರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರು. 

ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಗ ಕೃತ್ಯವು ಅತ್ಯಂತ ಹೇಯ, ಪೈಶಾಚಿಕ ಕೃತ್ಯವಾಗಿದೆ. ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತದ್ದಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅತ್ಯಾಚಾರದ ವಿಡಿಯೋ ದೃಶ್ಯವನ್ನು ಸಾಮಾಜಿಕ ಜಾಲದ ಹರಿಬಿಟ್ಟು ವಿದ್ಯಾರ್ಥಿನಿಯ ಜೀವನವನ್ನೇ ಹಾಳು ಮಾಡಿದ್ದಾರೆ. ಇದು ನಿಜಕ್ಕೂ ಗಂಭೀರ ಸ್ವರೂಪದ ಅಪರಾಧ ಕೃತ್ಯವಾಗಿದ್ದು, ಕ್ಷಮೆಗೆ ಅರ್ಹವಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ. 

ಹಿಂದುತ್ವ, ಭ್ರಾತೃತ್ವ, ಸಹೋದರತ್ವ ಎಂದೆಲ್ಲ ಹೇಳುವ ಈ ಸಂಘಟನೆಯ ಕಾರ್ಯಕರ್ತರೇ ಅತ್ಯಂತ ಹೀನ ಕೃತ್ಯ ನಡೆಸಿದ್ದಾರೆ. ಈ ಮೂಲಕ ಸಂಘಟನೆಯ ಧ್ಯೇಯೋದ್ದೇಶ ಏನೆಂಬುವುದನ್ನು ಜಗಜ್ಜಾಹಿರುಗೊಳಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. 

ತಡವಾಗಿ ಬೆಳಕಿಗೆ ಬಂದಿರುವ ಈ ಪ್ರಕರಣದ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಆರೋಪಿಗಳು ಎಬಿವಿಪಿ ಸಂಘಟನೆಗೆ ಸೇರಿದವರಾಗಿರುವುದರಿಂದ ನಿಷ್ಪಕ್ಷಪಾತ ತನಿಖೆ ನಡೆಯುವ ಸಾಧ್ಯತೆಗಳು ಕಡಿಮೆಯಿವೆ. ತನಿಖೆಯ ಮೇಲೆ ಪರಿವಾರದ ಸಂಘಟನೆಗಳು ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. 

ಈ ಕಾರಣದಿಂದ ದುಷ್ಕೃತ್ಯದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಎಬಿವಿಪಿ ಸಂಘಟನೆಯನ್ನು ನಿಷೇಧಿಸಬೇಕು. ಭವಿಷ್ಯದಲ್ಲಿ ಈ ರೀತಿಯ ಕೃತ್ಯಗಳ ನಡೆದಯಂತೆ ರಾಜ್ಯ ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು. 

ದೌರ್ಜನ್ಯಕ್ಕೊಳಗಾಗ ವಿದ್ಯಾರ್ಥಿನಿಗೆ ಸೂಕ್ತ ನ್ಯಾಯ ಕಲ್ಪಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಕೆ.ಬಾಲಾಜಿ, ಚೇತನ್, ವಿಜಯ, ಮಧು, ವಿಜಯ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News