ಬೆಂಗಳೂರಿಗೆ ಶರಾವತಿ ನದಿ ನೀರು ಯೋಜನೆ ಖಂಡಿಸಿ ಲೇಖಕಿಯರ ಸಂಘದಿಂದ ಪ್ರತಿಭಟನೆ

Update: 2019-07-04 12:31 GMT

ಶಿವಮೊಗ್ಗ, ಜು. 4: ಬೆಂಗಳೂರಿಗೆ ಶರಾವತಿ ನದಿ ನೀರು ಪೂರೈಸುವ ರಾಜ್ಯ ಸರ್ಕಾರದ ಪ್ರಸ್ತಾವಿತ ಯೋಜನೆ ವಿರೋಧಿಸಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಲೇಖಕಿಯರ ಸಂಘವು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿತು. 

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಭಾವ ಸರಿದೂಗಿಸುವ ಉದ್ದೇಶದಿಂದ, ಜಿಲ್ಲೆಯ ಲಿಂಗನಮಕ್ಕಿ ಜಲಾಶಯದ ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆ ಮಲೆನಾಡಿಗೆ ಮಾರಕವಾಗಲಿದೆ. ಇದೊಂದು ಜನವಿರೋಧಿ, ಪರಿಸರ ವಿರೋಧಿ ಯೋಜನೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಲೆನಾಡಿನ ಪ್ರಾಕೃತಿಕ ಸಂಪತ್ತಿನ ಮೇಲೆ ಈ ಹಿಂದಿನಿಂದಲೂ ನಿರಂತರ ದಾಳಿ ನಡೆಯುತ್ತಿದೆ. ಇದು ಮುಂದುವರಿದಿದ್ದು, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. ಮಲೆನಾಡು ಬರದ ನಾಡಾಗಿ ಪರಿವರ್ತಿತವಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. 

ಇಂತಹ ಸನ್ನಿವೇಶದಲ್ಲಿ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ರೂಪಿಸಲು ಮುಂದಾಗಿರುವ ಸರ್ಕಾರದ ಕ್ರಮ ಕಾರ್ಯಸಾಧುವಲ್ಲ. ಇದರಿಂದ ಸಾವಿರಾರು ಕೋಟಿ ರೂ.ಗಳು ಅನಗತ್ಯ ವ್ಯರ್ಥವಾಗಲಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಮಲೆನಾಡಿನ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು ನಗರ ಬಕಾಸುರನಂತೆ ಬೆಳೆಯುತ್ತಿದೆ. ಇಡೀ ರಾಜ್ಯದ ನೀರು ಕೊಟ್ಟರೂ ಆ ನಗರಕ್ಕೆ ಸಾಲುವುದಿಲ್ಲ ಎಂಬುವುದನ್ನು ಸರ್ಕಾರಕ್ಕೆ ಅರಿತುಕೊಳ್ಳಬೇಕಾಗಿದೆ. ಬೆಂಗಳೂರಿಗೆ ಪರ್ಯಾಯ ಕ್ರಮಗಳ ಮೂಲಕ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

ಶರಾವತಿ ಸಂತ್ರಸ್ತರಿಗೆ ಇಲ್ಲಿಯವರೆಗೂ ಸೂಕ್ತ ಮೂಲ ಸೌಕರ್ಯ ಕಲ್ಪಿಸಿಲ್ಲ. ಸಂತ್ರಸ್ತರಿಗೆ ನ್ಯಾಯ ಕಲ್ಪಿಸಿಕೊಡುವ ಕಾರ್ಯ ನಡೆಸಬೇಕು. ತಕ್ಷಣವೇ ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಪೂರೈಸುವ ಯೋಜನೆ ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

ಪ್ರತಿಭಟನೆಯಲ್ಲಿ ಸಂಘದ ಪ್ರಮುಖರಾದ ವಿಜಯ ಶ್ರೀಧರ್, ಡಾ. ಕೆ.ಎಸ್.ಪವಿತ್ರ, ಡಾ.ಕೆ.ಎಸ್.ಸುಬ್ರತಾ, ವಿಜಯಶ್ರೀ, ಸತ್ಯಭಾಮ, ಬನಶಂಕರಿ ಮೂರ್ತಿ, ಮಮತಾ ಹೆಗಡೆ, ಶ್ರೀರಂಜನಿ, ಕಿರಣ್ ದೇಸಾಯಿ, ಶಾರದಾ ಉಳವಿ, ರಜಿಯಾ, ಕಾತ್ಯಾಯಿನಿ ಸೇರಿದಂತೆ ಅನೇಕರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News