ವೀಡಿಯೊ ಡೌನ್‌ಲೋಡ್ ಮಾಡಲೂ ಭಯವಾಗುತ್ತಿದೆ!

Update: 2019-07-04 18:33 GMT

ಮಾನ್ಯರೇ,

ಮೊನ್ನೆ ಲಂಡನ್‌ನ ಭಾರತ್ ಭವನ್ ಮುಂದೆ ತಬ್ರೇಝ್ ಅನ್ಸಾರಿ ಎಂಬ ಅಮಾಯಕ ಸಹೋದರನ ಭೀಕರ ಕೊಲೆಯನ್ನು ಖಂಡಿಸಿ ಭಾರತೀಯ ಮೂಲದ ಹಿರಿಯ ಮಹಿಳೆಯೊಬ್ಬರು ಕೈಯಲ್ಲೊಂದು ಭಿತ್ತಿಪತ್ರ ಹಿಡಿದು ಒಂಟಿಯಾಗಿ ಪ್ರತಿಭಟಿಸುತ್ತಿದ್ದರು. ಅವರು ಇದು ಹೀಗೆ ಮುಂದುವರಿದರೆ ಭಾರತ ಚೆಚೆನ್ಯ-ಬೋಸ್ನಿಯಾ ಆಗುವ ದಿನ ದೂರವಿಲ್ಲ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಿದ್ದರು. ವಾಟ್ಸ್‌ಆ್ಯಪ್‌ನಲ್ಲಿ ಯಾವುದಾದರೂ ವೀಡಿಯೊ ಕ್ಲಿಪ್ ಬಂದರೆ ಈಗೀಗ ಅದನ್ನು ಡೌನ್ ಲೋಡ್ ಮಾಡಲೂ ಭಯವಾಗುತ್ತಿದೆ. ಈಗೀಗ ಪ್ರತಿದಿನವೂ ಒಂದಲ್ಲ ಒಂದು ಅಮಾನುಷ ಕ್ರೌರ್ಯದ, ಬರ್ಬರತೆಯ ವೀಡಿಯೊಗಳು ಬರುತ್ತಲೇ ಇರುತ್ತವೆ. ಹತ್ತಿಪ್ಪತ್ತು ಜನ ಸೇರಿಕೊಂಡು ತಮ್ಮ ಸಹಮಾನವನನ್ನು ಹೊಡೆದು, ಬಡಿದು ಕೊಲ್ಲುವುದು, ಅಮಾಯಕ ಒಂಟಿ ಹೆಣ್ಣಿನ ಮೇಲೆ ಹತ್ತಾರು ಜನ ಸೇರಿ ದೈಹಿಕ, ಲೈಂಗಿಕ ದೌರ್ಜನ್ಯವೆಸಗುವುದು, ಅತ್ಯಾಚಾರವೆಸಗುವುದು, ಮನುಷ್ಯರನ್ನು ಕಂಬಗಳಿಗೆ ಕಟ್ಟಿ ಹೊಡೆಯುವುದು, ಚೂರಿ ಚಾಕುಗಳಿಂದ ತಿವಿಯುವುದು, ಮಹಿಳೆಯರನ್ನು, ಪುರುಷರನ್ನು ನಗ್ನಗೊಳಿಸಿ ಮೆರವಣಿಗೆ ಮಾಡುವುದು, ಕೊಡಲಿಯಿಂದ ಕಡಿಯುವುದು, ಹಸುಗೂಸುಗಳ ಮೇಲೆ ಕ್ರೌರ್ಯವೆಸಗುವುದು, ವಯೋವೃದ್ಧರ ಮೇಲೆ ಪೈಶಾಚಿಕವಾಗಿ ಹಲ್ಲೆಗೈಯುವುದು,ಇಂತಹ ಪೈಶಾಚಿಕ ಕೃತ್ಯಗಳನ್ನು ಹತ್ತಾರು ಜನ ಸುತ್ತಲೂ ನಿಂತು ತಮಾಷೆ ನೋಡುವಂತೆಯೋ.... ಯಾವುದೋ ಲೈವ್ ಶೋ ನೋಡುವಂತೆಯೋ ನೋಡುವುದು ಮತ್ತು ಮೊಬೈಲ್ ಗಳಲ್ಲಿ ರೆಕಾರ್ಡ್ ಮಾಡಿ ವೈರಲ್ ಮಾಡುವುದು ಅಥವಾ ಯಾರು ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಾರೋ ಅವರೇ ಅದನ್ನು ರೆಕಾರ್ಡ್ ಮಾಡಿ ವೈರಲ್ ಮಾಡುವುದು ಇವೆಲ್ಲಾ ಇತ್ತೀಚಿನ ವರ್ಷಗಳಲ್ಲಿ ಸರ್ವೇ ಸಾಮಾನ್ಯವೆಂಬತಾಗಿಬಿಟ್ಟಿವೆ. ಲಂಡನ್‌ನ ಭಾರತ್ ಭವನದ ಮುಂದೆ ಆ ಹಿರಿಯ ಮಹಿಳೆಯೇನೋ ಭಾರತ ಬೋಸ್ನಿಯಾ, ಚೆಚೆನ್ಯಾವಾಗುವ ದಿನ ದೂರವಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದರು. ಆದರೆ ಭಾರತ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಬೋಸ್ನಿಯಾ, ಚೆಚೆನ್ಯಾವನ್ನೂ ಮೀರಿಸಿ ಪೈಶಾಚಿಕತೆಯಲ್ಲಿ ಮೊದಲ ಸ್ಥಾನ ಗಳಿಸುವತ್ತ ದಾಪುಗಾಲಿಡುತ್ತಿದೆ.
ಕಾನೂನು ಭಂಜಕರೇ ಅಧಿಕಾರ ಹಿಡಿದಾಗ ಕಾನೂನು ಭಂಜನೆಯೇ ಕಾನೂನಾಗುತ್ತದೆ ಎಂಬ ಮಾತನ್ನು ಸದ್ಯದ ಭಾರತ ಸಾಬೀತುಪಡಿಸುತ್ತಿದೆ.

Writer - -ಇಸ್ಮತ್ ಪಜೀರ್, ಮಂಗಳೂರು

contributor

Editor - -ಇಸ್ಮತ್ ಪಜೀರ್, ಮಂಗಳೂರು

contributor

Similar News