ಹರೇನ್ ಪಾಂಡ್ಯ ಹತ್ಯೆ ಪ್ರಕರಣದಲ್ಲಿ 12 ಮಂದಿ ದೋಷಿಗಳು: ಸುಪ್ರೀಂ ತೀರ್ಪು

Update: 2019-07-05 07:04 GMT

ಹೊಸದಿಲ್ಲಿ. ಜು.5: ಗುಜರಾತ್ ರಾಜ್ಯದ ಮಾಜಿ ಸಚಿವ ಹರೇನ್ ಪಾಂಡ್ಯ ಹತ್ಯೆ ಪ್ರಕರಣದಲ್ಲಿ 12 ಮಂದಿ ದೋಷಿಗಳು ಎಂದು ಸುಪ್ರೀಂ ಕೋರ್ಟ್ ಇಂದು ತೀರ್ಪಿತ್ತಿದೆ. ಆರೋಪಿಗಳನ್ನು ಖಲಾಸೆಗೊಳಿಸಿ ಗುಜರಾತ್ ಹೈಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನು ಬದಿಗೆ ಸರಿಸಿರುವ ಜಸ್ಟಿಸ್ ಅರುಣ್ ಮಿಶ್ರ ಹಾಗು ಜಸ್ಟಿಸ್ ವಿನೀತ್ ಸರನ್ ಅವರನ್ನೊಳಗೊಂಡ ಪೀಠ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.

ತರುವಾಯ ಈ ಕೊಲೆ ಪ್ರಕರಣದ ಮರು ತನಿಖೆ ಕೋರಿ ಕಾಮನ್ ಕಾಸ್ ಎಂಬ ಎನ್‍ ಜಿಒ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಗುಜರಾತ್ ಗೃಹ ಸಚಿವರಾಗಿದ್ದ ಹರೇನ್ ಪಾಂಡ್ಯ ಅವರನ್ನು ಮಾರ್ಚ್ 26, 2003ರಂದು ದುಷ್ಕರ್ಮಿಗಳು ಅವರು ತಮ್ಮ ಕಾರಿನೊಳಗಡೆಯಿರುವಂತೆಯೇ ಗುಂಡಿಕ್ಕಿ ಕೊಂದಿದ್ದರು. ಈ ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಗುಜರಾತ್ ಪೊಲೀಸರು ನಡೆಸಿದ್ದರು. ನಂತರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಪ್ರಕರಣದಲ್ಲಿ ಒಟ್ಟು 15 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು.

2007ರ ಜೂನ್ ನಲ್ಲಿ ವಿಶೇಷ ನ್ಯಾಯಾಲಯವು ತನ್ನ ತೀರ್ಪಿನಲ್ಲಿ 12 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿತ್ತು. ಈ ಅಪರಾಧಿಗಳನ್ನು ವಿಹಿಂಪ ನಾಯಕ ಜಗದೀಶ್ ತಿವಾರಿ ಕೊಲೆ ಪ್ರಕರಣದಲ್ಲೂ ದೋಷಿಗಳೆಂದು ಘೋಷಿಸಲಾಗಿತ್ತು. ಪಾಂಡ್ಯ ಕೊಲೆ ಹಾಗೂ ತಿವಾರಿ ಕೊಲೆ ಪ್ರಕರಣದಲ್ಲಿ ಸಂಚು ಹೂಡಿದವರು ಅದೇ ವ್ಯಕ್ತಿಗಳಾಗಿದ್ದರಿಂದ ಪಾಂಡ್ಯ ಕೊಲೆ ಪ್ರಕರಣದ ವಿಚಾರಣೆ ಜತೆ ತಿವಾರಿ ಪ್ರಕರಣದ ವಿಚಾರಣೆಯೂ ನಡೆದಿತ್ತು.

ಆದರೆ ಪಾಂಡ್ಯ ಕೊಲೆ ಪ್ರಕರಣದಲ್ಲಿ ತಮ್ಮನ್ನು ದೋಷಿ ಎಂದು ಘೋಷಿಸಿದ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ 12 ಮಂದಿ ಗುಜರಾತ್ ಹೈಕೋರ್ಟಿಗೆ ಅಪೀಲು ಸಲ್ಲಿಸಿದ ನಂತರ ಅವರೆಲ್ಲರನ್ನೂ ದೋಷಮುಕ್ತಗೊಳಿಸಿ ಹೈಕೊರ್ಟ್ ಆದೇಶ ಹೊರಡಿಸಿತ್ತು. ತಿವಾರಿ ಕೊಲೆ ಪ್ರಕರಣ ಹಾಗೂ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ಅವರ ವಿರುದ್ಧದ ತೀರ್ಪನ್ನು ನ್ಯಾಯಾಲಯ ಎತ್ತಿ ಹಿಡಿದಿತ್ತು.

ನಂತರ ಸಿಬಿಐ ಹಾಗೂ ಗುಜರಾತ್ ಸರಕಾರ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಕದ ತಟ್ಟಿದ್ದವು. ಇನ್ನೊಂದು ಬೆಳವಣಿಗೆಯಲ್ಲಿ ಈ ವರ್ಷದ ಜನವರಿಯಲ್ಲಿ ಸೆಂಟರ್ ಫಾರ್ ಪಿಐಎಲ್ ಎಂಬ ಎನ್‍ಜಿಒ ಪಾಂಡ್ಯ ಪ್ರಕರಣದ ಮರು ತನಿಖೆ ಕೋರಿ ಅಪೀಲು ಸಲ್ಲಿಸಿತ್ತು. ಹರೇನ್ ಪಾಂಡ್ಯ ಪ್ರಕರಣದಲ್ಲಿ ಮಾಧ್ಯಮಗಳು ವರದಿ ಮಾಡಿದ ಕೆಲ ‘ಸ್ಫೋಟಕ ಮಾಹಿತಿಯ' ಆಧಾರದಲ್ಲಿ ಈ ಪಿಐಎಲ್ ದಾಖಲಿಸಲಾಗಿತ್ತು. ಇನ್ನೊಂದು ವಿವಾದಿತ ಪ್ರಕರಣವಾಗಿರುವ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‍ಕೌಂಟರ್ ಪ್ರಕರಣದ ಸಾಕ್ಷಿಯೊಬ್ಬನ ಹೇಳಿಕೆಯನ್ನೂ ಈ ಪಿಐಎಲ್ ಅವಲಂಬಿಸಿತ್ತು.

ಹರೇನ್ ಪಾಂಡ್ಯರ ಹತ್ಯೆಗೆ ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿ ಡಿ.ಜಿ. ವಂಝಾರ ತಮಗೆ ಗುತ್ತಿಗೆ ನೀಡಿದ್ದರೆಂದು ಹಾಗೂ ಸೊಹ್ರಾಬುದ್ದೀನ್ ಸಹಚರ ತುಳಸೀರಾಂ ಪ್ರಜಾಪತಿ ಈ ಕೊಲೆಯನ್ನು ನಯೀಂ ಹಾಗೂ ಶಾಹಿದ್ ರಾಮಪುರಿ ಜತೆ ಸೇರಿ  ನಡೆಸಿದ್ದನೆಂದು ನವೆಂಬರ್ 3, 2018ರಂದು ವಿಚಾರಣಾ ನ್ಯಾಯಾಲಯದಲ್ಲಿ ಸಾಕ್ಷಿ ಆಝಂ ಖಾನ್ ತನ್ನ ಹೇಳಿಕೆಯಲ್ಲಿ  ತಿಳಿಸಿದ್ದ.

ತಾನು ಈ ಮಾಹಿತಿಯನ್ನು ಸಿಬಿಐಗೆ 2010ರಲ್ಲಿ ನೀಡಿದ್ದರೂ (ಆಗ ಹರೇನ್ ಪಾಂಡ್ಯ ಕೊಲೆ ಪ್ರಕರಣ ಕುರಿತಾದ ಅಪೀಲು ಗುಜರಾತ್ ಹೈಕೋರ್ಟಿನ ಮುಂದೆ ಬಾಕಿಯಿತ್ತು) ಸಿಬಿಐ ಇದನ್ನು ಕಿವಿಗೆ ಹಾಕಿಕೊಂಡಿಲ್ಲ ಎಂದೂ ಆಝಂ ಖಾನ್ ಬಹಿರಂಗ ಪಡಿಸಿದ್ದ. ತನಿಖಾ ಏಜನ್ಸಿಗೆ ಸಮಸ್ಯೆ ಉಂಟಾಗಬಹುದೆಂದು ಆತನಿಗೆ ಸುಮ್ಮನಿರಲು ಹೇಳಲಾಗಿತ್ತೆಂದು ಆರೋಪಿಸಲಾಗಿತ್ತು.

ಈ ಪಿಐಎಲ್ ಅನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿರೋಧಿಸಿದ್ದರು. ರಾಜ್ಯ ಸರಕಾರ  ಈಗಾಗಲೇ ಸಲ್ಲಿಸಿರುವ ಅಪೀಲು ಇರುವುದರಿಂದ  ಪಿಐಎಲ್ ಅಗತ್ಯವೇನಿದೆ ಎಂದು ಸುಪ್ರೀಂ ಕೋರ್ಟ್ ಪೀಠ ಕೂಡ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News